ಸ್ಮಾರ್ಟ್‌ಸಿಟಿಯಿಂದ ಅವೈಜ್ಞಾನಿಕ ಕ್ರೀಡಾಂಗಣ ನಿರ್ಮಾಣ: ಆರೋಪ

ತುಮಕೂರು, ನ. ೧೭- ಸರ್ಕಾರ ಹಾಗೂ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ಹಾಗೂ ಸುತ್ತಮುತ್ತಲ ಕ್ರೀಡಾ ಸಮುಚ್ಚಯಗಳ ನಿರ್ಮಾಣ ಕಾರ್ಯ ಅವೈಜ್ಞಾನಿಕವಾಗಿದ್ದು, ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರೀಡಾಪಟುಗಳು ಮತ್ತು ಸಾರ್ವಜನಿಕರನ್ನು ಕತ್ತಲೆಯಲ್ಲಿಟ್ಟಿದ್ದಾರೆ ಎಂದು ನಗರ ಕ್ರೀಡಾ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಆರ್. ಚಿಕ್ಕರಂಗಯ್ಯ ಆರೋಪಿಸಿದರು.


ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಹಳೆಯ ಕ್ರೀಡಾಂಗಣವನ್ನು ಕಿತ್ತು ಹಾಕಿ ಹೊಸ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಕ್ರೀಡಾಂಗಣದ ಅಕ್ಕಪಕ್ಕದಲ್ಲಿದ್ದ ಸ್ಕೇಟಿಂಗ್, ಬ್ಯಾಸ್ಕೆಟ್‌ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್ ಕೋರ್ಟುಗಳನ್ನು ಕಿತ್ತು ಹಾಕಲಾಗಿದೆ. ಈ ಅಂಕಣದಲ್ಲಿ ದಿನವೂ ಅಭ್ಯಾಸ ಮಾಡುತ್ತಿದ್ದ ಕ್ರೀಡಾಪಟುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಸಾಕಷ್ಟು ಕ್ರೀಡಾ ಚಟುವಟಿಕೆಗಳು ನಿಂತು ಹೋಗಿವೆ. ಈ ಬಗ್ಗೆ ಕ್ರೀಡಾ ಮತ್ತು ಯುವಜನ ಸೇವಾ ಅಧಿಕಾರಿಗಳು ಸಹ ಗಮನಹರಿಸುತ್ತಿಲ್ಲ. ಇದು ಜಿಲ್ಲೆಯ ಕ್ರೀಡಾ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬ್ಯಾಡ್ಮಿಂಟನ್ ವುಡನ್ ಕೋರ್ಟು ನಿರ್ಮಾಣ ಮಾಡಲು ೧ ಕೋಟಿ ರೂ.ಗಳನ್ನು ನೀಡಲಾಗಿದೆ. ಜಿಮ್ ಮತ್ತು ಬ್ಯಾಡ್ಮಿಂಟನ್ ಕೋರ್ಟು ಇದ್ದ ಜಾಗದಲ್ಲಿ ಬೇರೆಯದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಸದರಿ ಜಾಗದಲ್ಲಿ ಸರ್ಕಾರಿ ಆದೇಶದಂತೆ ಮರದ ಬ್ಯಾಡ್ಮಿಂಟನ್ ಅಂಕಣ ನಿರ್ಮಿಸುವಂತೆ ಶಾಸಕರು, ಸಂಬಂಧಪಟ್ಟವರ ಬಳಿ ಮನವಿ ಮಾಡಿದರೂ ಯಾರಿಂದಲೂ ಸಮರ್ಪಕ ಉತ್ತರವಿಲ್ಲ. ನಗರದ ಹೃದಯ ಭಾಗದಲ್ಲಿರುವ ಈ ಅಂಕಣದಲ್ಲಿ ಹಿರಿಯ, ಕಿರಿಯ ಕ್ರೀಡಾಪಟುಗಳು ದಿನವೂ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ಸದರಿ ಅಂಕಣವನ್ನು ಉಳಿಸಿಕೊಡಬೇಕೆಂಬುದು ನಗರ ಕ್ರೀಡಾ ರಕ್ಷಣಾ ವೇದಿಕೆಯ ಬೇಡಿಕೆಯಾಗಿದೆ ಎಂದರು.
ಸುಮಾರು ೪೫ ಕೋಟಿ ರೂ. ವೆಚ್ಚದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ವಿವಿದೋದ್ದೇಶ ಕ್ರೀಡಾಂಗಣವನ್ನಾಗಿ ಹೊಸದಾಗಿ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕೇವಲ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಮಾತ್ರ ಅನುಕೂಲವಾಗುವಂತೆ ಸಿಂಥೆಟಿಕ್ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬಡವರು, ಗ್ರಾಮೀಣ ಮಕ್ಕಳು ಸ್ಪೈಕ್ ಶೂ ಇಲ್ಲದೆ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ಬೇರೆ ಕ್ರೀಡೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ತುಮಕೂರು ನಗರಕ್ಕೆ ಸದ್ಯಕ್ಕೆ ಇರುವುದು ಒಂದೇ ಕ್ರೀಡಾಂಗಣ. ಹಾಗಾಗಿ ಇಲ್ಲಿ ಅಥ್ಲೆಟಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ಆಡಲು ಅವಕಾಶವಾಗುವಂತೆ ಅಂಕಣಗಳನ್ನು ನಿರ್ಮಿಸಬೇಕು ಎಂಬುದು ವೇದಿಕೆಯ ಒತ್ತಾಯವಾಗಿದೆ ಎಂದರು.
ತುಮಕೂರು ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಕೈಗಾರಿಕೆಗಳು ಹೆಚ್ಚಾದಂತೆ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಮುಂದಿನ ೧೦-೨೦ ವರ್ಷಗಳ ಜನಸಂಖ್ಯೆ, ನಗರದ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಜಿಲ್ಲಾಡಳಿತ ನಗರದ ನಾಲ್ಕು ಕಡೆಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗವನ್ನು ಮೀಸಲಿರಿಸಿ, ಆಯಾಯ ಭಾಗದ ಜನರು ಅಲ್ಲಿಯೇ ಕ್ರೀಡಾ ಚಟುವಟಿಕೆ ಮಾಡಿಕೊಳ್ಳಲು ಅವಕಾಶ ಮಾಡಬೇಕು ಎಂಬುದು ವೇದಿಕೆಯ ಆಗ್ರಹವಾಗಿದೆ ಎಂದು ಹೇಳಿದರು.
ತುಮಕೂರು ನಗರವನ್ನು ಇತರೆ ಜಿಲ್ಲಾ ಕೇಂದ್ರಗಳಂತೆ ಕ್ರಿಯಾಶೀಲ ಕ್ರೀಡೆಗಳ ಚಟುವಟಿಕೆ ಕೇಂದ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ತುಮಕೂರು ನಗರ ಕ್ರೀಡಾ ರಕ್ಷಣಾ ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಹಿರಿಯ ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು, ಯುವಜನರನ್ನು ಒಳಗೊಂಡ ವೇದಿಕೆ ಇದಾಗಿದ್ದು, ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಯನ್ನು ಉತ್ತೇಜಿಸಲು ಜಿಲ್ಲಾಡಳಿತಕ್ಕೆ ಅಗತ್ಯ ಸಲಹೆ ನೀಡುವುದು, ಕ್ರೀಡಾಕೂಟಗಳನ್ನು ಏರ್ಪಡಿಸುವುದು ಸೇರಿದಂತೆ ಹಲವಾರು ಮಹತ್ವದ ಉದ್ದೇಶಗಳನ್ನು ಹೊಂದಿದ್ದು, ಸಾರ್ವಜನಿಕರು, ಮಾಧ್ಯಮಗಳು ನಮ್ಮೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರ ಕ್ರೀಡಾ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಬಿ.ಆರ್. ವೇಣುಗೋಪಾಲ್, ಉಪಾಧ್ಯಕ್ಷರಾದ ಪಿ.ಎನ್. ರಾಮಯ್ಯ, ಅನಿಲ್‌ಕುಮಾರ್, ದೊಡ್ಡರಾಜು, ಕಾರ್ಯದರ್ಶಿ ಎಂ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ದೇವರಾಜು, ಲೋಕೇಶ್, ಶ್ರೀನಿವಾಸ್, ಖಜಾಂಚಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.