ಸ್ಮಾರಕ ಭವನ ಕಾಮಗಾರಿ ವೀಕ್ಷಣೆ


ಗದಗ,ಜು.1: ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯದ ಅನುದಾನ ಒದಗಿಸಲು ಸರ್ಕಾರ ಬದ್ಧ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಎಪಿಎಂಸಿ ಹತ್ತಿರದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸುತ್ತಾ ಸ್ಮಾರಕ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ 5 ಕೋಟಿ ರೂ.ಅನುದಾನ ಒದಗಿಸಲಾಗಿತ್ತು. ಅದರಂತೆ ಕಾಮಗಾರಿ ಆರಂಭಿಸಿ ನೀಡಿದ ಅನುದಾನವನ್ನು ಬಳಸಲಾಗಿದೆ. ಹೆಚ್ಚುವರಿಯಾಗಿ 1.25 ಕೋಟಿ ರೂ. ವೆಚ್ಚವನ್ನು ಮಾಡಲಾಗಿದ್ದು ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ ಹೆಚ್ಚುವರಿಯಾಗಿ 7 ಕೋಟಿಗಳ ಅನುದಾನ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವರು ಈಗಾಗಲೇ ರಂಗಮಂದಿರದ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡ ಸಂಸ್ಸøತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರೊಂದಿಗೆ ಸ್ಮಾರಕ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆ ಚರ್ಚಿಸಲಾಗಿದೆ. ಅವರು ಸಹ ಸರ್ಕಾರಾತ್ಮಕವಾಗಿ ಸ್ಪಂದಿಸಿದ್ದು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ ಅನುದಾನ ಪಡೆಯಲಾಗುವುದು ಎಂದರು.
ಪುಟ್ಟರಾಜ ಗವಾಯಿಗಳ ಸ್ಮಾರಕ ಭವನವನ್ನು ಸಿದ್ಧರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಆರಂಭಿಸಲಾಗಿತ್ತು. ಅದರ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಯನ್ನು ಸಹ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಿಂದಲೇ ಮಾಡಲಾಗುವುದು. ಅಭಿವೃದ್ಧಿಯಲ್ಲಿ ಸರ್ಕಾರ ಸದಾ ಮುಂದಿರಲಿದೆ ಎಂದರು.
ಈ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಶ್ರೀಗಳಾದ ಕಲ್ಲಯ್ಯಜ್ಜನವರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಕನ್ನಡ ಮತ್ತು ಸಂಸ್ಸøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಹಿರೇಮಠ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಎಸ್. ಪಾಟೀಲ ಸೇರಿದಂತೆ ಇತರರು ಇದ್ದರು.