ಸ್ಮಶಾನ ಭೂಮಿ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಿ


ಬಳ್ಳಾರಿ,ಏ.04: ಬಳ್ಳಾರಿ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಅವಶ್ಯಕತೆ ಇದ್ದಲ್ಲಿ ಅಥವಾ ಈಗಾಗಲೇ ಇರುವ ಸ್ಮಶಾನ ಭೂಮಿಯು ಒತ್ತುವರಿಯಾಗಿದ್ದಲ್ಲಿ ಆಯಾ ತಾಲೂಕಿನ ತಹಶೀಲ್ದಾರರ ಕಚೇರಿ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಈಗಾಗಲೇ ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿರುವ ಗ್ರಾಮಗಳ ಸ್ಮಶಾನ ಜಮೀನುಗಳ ಕುರಿತು ಪಹಣಿ ಹಾಗೂ ಕಂದಾಯ ದಾಖಲೆಗಳಲ್ಲಿ ಲಭ್ಯವಿರುತ್ತದೆ. ಸ್ಮಶಾನ ಭೂಮಿ ಇಲ್ಲದೇ ಇರುವ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಗುರುತಿಸಿ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿರುತ್ತದೆ.
ಸರ್ಕಾರಿ ಜಮೀನು ಲಭ್ಯವಿಲ್ಲದೇ ಇರುವ ಗ್ರಾಮಗಳಲ್ಲಿ ರೈತರಿಂದ ಖಾಸಗಿ ಜಮೀನುಗಳನ್ನು ಸರ್ಕಾರಿ ಮಾರ್ಗಸೂಚಿಗಳಂತೆ ಖರೀದಿಸಿ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಲು ಅವಕಾಶ ಇರುತ್ತದೆ. ಸಾರ್ವಜನಿಕ ಸ್ಮಶಾನಕ್ಕಾಗಿ ಜಮೀನು ಅವಶ್ಯಕವೆನಿಸಿದಲ್ಲಿ ಗೋಮಾಳ ಜಮೀನನ್ನು ಸಹ ಸ್ಮಶಾನಕ್ಕಾಗಿ ಕಾಯ್ದಿರಿಸಲು ಅವಕಾಶ ಇರುತ್ತದೆ. ಹಾಗೂ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು, ಸಕ್ರಮೀಕರಣಕ್ಕಾಗಿ ಸಲ್ಲಿಸಿರುವ ನಮೂನೆ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳನ್ನು ವಜಾಗೊಳಿಸಿ ಅಂತಹ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸಲು ಅವಕಾಶ ಇರುತ್ತದೆ.
ಜಿಲ್ಲೆಯಲ್ಲಿ ಒಟ್ಟು 299 ಕಂದಾಯ ಗ್ರಾಮಗಳಿದ್ದು, 21 ಬೇಚಾರಕ್ ಗ್ರಾಮಗಳನ್ನು ಹೊರತುಪಡಿಸಿ ಉಳಿದ 278 ಗ್ರಾಮಗಳಿಗೆ ಸ್ಮಶಾನ ಭೂಮಿ ಸೌಲಭ್ಯವನ್ನು ಒದಗಿಸಲಾಗಿರುತ್ತದೆ.
ಸರ್ಕಾರಿ ಜಮೀನು, ಸ್ಮಶಾನ, ಕೆರೆ ಕಟ್ಟೆ, ಕುಂಟೆ, ಹಳ್ಳಿ, ಕಾಲುವೆ, ನದಿ ಹಾಗೂ ಗ್ರಾಮ ನಕ್ಷೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ವರ್ಗೀಕರಣದ ಎಲ್ಲಾ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಈ ಬಗ್ಗೆಯೂ ಸಾರ್ವಜನಿಕರು ಸಂಬಂಧಿಸಿದ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.