ಸ್ಮಶಾನ, ಪಾರ್ಕ್, ಶೌಚಾಲಯ ನಿರ್ಮಿಸಿ ನಾಯಿ ಕಾಟ ತಪ್ಪಿಸಿಪಟ್ಟಣ ಪಂಚಾಯ್ತಿಗೆ ಸಂಘ ಸಂಸ್ಥೆ ಮುಖಂಡರ ಸಲಹೆ

ಹುಳಿಯಾರು, ಜ. ೧೩- ಸಾರ್ವಜನಿಕರು ಬಾರದೆ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಆದರೆ ಸಭೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗದಿದ್ದರೂ ಬಂದಿದ್ದ ಕೆಲವೇ ಕೆಲವು ಮಂದಿ ಇಟ್ಟುಕೊಂಡು ಸಭೆಯ ಶಾಸ್ತ್ರ ಮುಗಿಸಿಕೊಂಡು ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕರವೇ, ದಲಿತ ಸಹಾಯವಾಣಿ, ಕನ್ನಡಸೇನೆ, ಡಿಎಸ್‌ಎಸ್‌ಗಳ ಮುಖಂಡರು ಮಾತ್ರ ಸಭೆಗೆ ಬಂದಿದ್ದರಾದರೂ ಸಭೆಗೆ ಅತ್ಯಮೂಲ್ಯವಾದ ಸಲಹೆಯನ್ನು ನೀಡಿ ಗಮನ ಸೆಳೆದರು. ಕಾಟಾಚಾರಕ್ಕೆ ಸಭೆ ಮಾಡುವುದನ್ನು ಬಿಟ್ಟು ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ಪ್ರಮುಖರನ್ನೂ ಕರೆದು ಸಭೆ ಮಾಡಿ. ಸಭೆಯಲ್ಲಿ ನೀಡಿದ ಸಲಹೆಯನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡದೆ ಕಾರ್ಯರೂಪಕ್ಕೆ ತನ್ನಿ ಎನ್ನುವ ಕಿವಿ ಮಾತನ್ನೂ ಸಹ ಹೇಳಿದರು.
ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ೨೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಸಹ ಇಲ್ಲಿನ ನಿವಾಸಿಗಳು ಸತ್ತಾಗ ಹೂಳಲು ೬-೩ ಅಡಿ ಜಾಗವಿಲ್ಲ. ಹಿಂದೂ ರುದ್ರ ಭೂಮಿಗೆ ಜಾಗ ಮೀಸಲಿಡಿ ಎಂದು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಹ ಸ್ಪಂಧಿಸಿಲ್ಲ. ಸತ್ತ ಮೇಲಾದರೂ ಸಹ ನೆಮ್ಮದಿಯಿಂದ ಅಂತ್ಯ ಸಂಸ್ಕಾರ ಮಾಡಲು ಜಾಗ ಮೀಸಲಿಡಿ ಎಂದು ಒತ್ತಾಯಿಸಿದರು.
ಮುಖ್ಯಾಧಿಕಾರಿ ನಾಗಭೂಷಣ್ ಅವರು ತಹಶೀಲ್ದಾರ್ ಅವರಿಗೆ ಜಾಗ ಗುರುತಿಸಿಕೊಡಲು ಮನವಿ ಸಲ್ಲಿಸಲಾಗಿದ್ದು ಅವರಿಂದ ಪ್ರತಿಕ್ರಿಯ ಬಂದಿಲ್ಲ. ಮತ್ತೊಮ್ಮೆ ಹೊಸ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಹುಳಿಯಾರು ಬಸ್ ನಿಲ್ದಾಣಕ್ಕೆ ಶಾಲಾ ಮಕ್ಕಳು, ವೃದ್ಧರು, ವಿಕಲಚೇತನರು ಸೇರಿದಂತೆ ನಿತ್ಯ ಸಹಸ್ತ್ರಾರು ಮಂದಿ ಬಂದೋಗುತ್ತಾರೆ. ಆದರೆ ಇಲ್ಲಿ ಕುಡಿಯಲು ನೀಡಿಲ್ಲ, ಉತ್ತಮ ಶೌಚಾಲಯವಿಲ್ಲ. ಕನಿಷ್ಠ ಪಕ್ಷ ಬಸ್‌ಗಳೂ ಸಹ ಸರಿಯಾಗಿ ನಿಲ್ಲಲ್ಲು ಜಾಗವಿಲ್ಲದೆ ಫುಟ್‌ಪಾತ್ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ ಎಂದರು. ಇದಕ್ಕೆ ಅಧ್ಯಕ್ಷ ಕೆಎಂಎಲ್ ಕಿರಣ್ ಅವರು ಬಸ್ ನಿಲ್ದಾಣ, ರಾಜಕುಮಾರ್ ರಸ್ತೆ, ರಾಮಗೋಪಾಲ್ ಸರ್ಕಲ್‌ಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ೧ ರೂ. ಕಾಯಿನ್ ಹಾಕಿ ೧ ಲೀಟರ್ ಶುದ್ಧ ನೀರು ಪಡೆಯುವ ಘಟಕವನ್ನು ಹಾಕುತ್ತೇವೆ ಎಂದರಲ್ಲದೆ, ಬಸ್ ನಿಲ್ದಾಣದ ಫುಟ್‌ಪಾತ್ ವ್ಯಾಪಾರಿಗಳನ್ನು ಖಾಲಿ ಮಾಡಿಸಿ ಬಸ್ ನಿಲ್ಲಲ್ಲು ಸ್ಥಳವಕಾಶ ಕಲ್ಪಿಸುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಉಳಿದಂತೆ ಬೀದಿ ನಾಯಿಗಳ ಕಾಟ ತಪ್ಪಿಸುವಂತೆಯೂ, ಪ್ರಮುಖ ಸ್ಥಳಗಳಲ್ಲಿ ಮೂತ್ರ ವಿಸರ್ಜನಾ ಬೂತ್ ನಿರ್ಮಿಸುವಂತೆಯೂ, ೧೨ ನೇ ವಾರ್ಡ್‌ನ ಶುದ್ಧ ಕುಡಿಯುವ ನೀರಿನ ಘಟಕವನ್ನು ಖಾಸಗಿ ಸಂಸ್ಥೆಯಿಂದ ಪಂಚಾಯ್ತಿ ಹಸ್ತಾಂತರ ಮಾಡಿಕೊಳ್ಳುವಂತೆಯೂ, ಮಕ್ಕಳಿಗೆ ಆಟವಾಡಲು, ವೃದ್ಧರು ವಾಯುವಿಹಾರ ಮಾಡಲು ಪಾರ್ಕ್ ನಿರ್ಮಿಸುವಂತೆಯೂ, ಕರವೇ ಸರ್ಕಲ್‌ನಲ್ಲಿ ವ್ಯಾಪಾರಿಗಳ ಕಿರಿಕಿರಿ ತಪ್ಪಿಸುವಂತೆಯೂ, ರಾಮಗೋಪಾಲ್ ಸರ್ಕಲ್‌ನಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆಯೂ, ತೂಬು ಕಾಲುವೆ ಅಗಲೀಕರಣ ಮಾಡುವಂತೆಯೂ, ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವು ಮಾಡಲು ಮಾಲೀಕರಿಗೆ ನೋಟಿಸ್ ನೀಡುವಂತೆಯೂ, ವಿದ್ಯುತ್ ಚಿತಾಗಾರ ಹಾಗೂ ಮುಕ್ತಿವಾಹನ ಖರೀದಿಸುವಂತೆಯೂ ಸಾರ್ವಜನಿಕರು ಆಗ್ರಹಿಸಿದರು.
ಸರ್ಕಾರಿ ಜಾಗದಲ್ಲಿರುವ ಮುಕ್ತಿಧಾಮವನ್ನು ಕೆಲವೇ ಕೆಲವು ಮಂದಿ ಕಮಿಟಿ ಮಾಡಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇವರು ಇತರೆ ಜಾತಿ ಜನರ ಅಂತ್ಯಕ್ರಿಯೆಗೆ ಬೀಗ ಕೊಡದೆ ಸತಾಯಿಸುತ್ತಿದ್ದಾರೆ. ಹುಳಿಯಾರು ಪಟ್ಟಣದಲ್ಲಿ ಸ್ಮಶಾನ ಇಲ್ಲದಿರುವುದರಿಂದ ಎಲ್ಲರೂ ಇಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಿರುವುದರಿಂದ ಖಾಸಗಿ ಸಂಸ್ಥೆಯಿಂದ ಮುಕ್ತಿಧಾಮವನ್ನು ಪಂಚಾಯ್ತಿಗೆ ಹಸ್ತಾಂತರ ಮಾಡಿಕೊಳ್ಳಿ. ಪಂಚಾಯ್ತಿಯೆ ಎಲ್ಲರಿಗೂ ಅಂತ್ಯಕ್ರಿಯೆಗೆ ಅವಕಾಶ ಕೊಟ್ಟು ನಿರ್ವಹಣೆ ಮಾಡೋಣ ಎಂದು ಪ.ಪಂ. ಅಧ್ಯಕ್ಷ ಕೆಎಂಎಲ್ ಕಿರಣ್ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ಹಾಗಾಗಿ ಬೆಸ್ಕಾಂ ಕಾಂಪೌಂಡ್ ಮುಂಭಾಗದಲ್ಲಿ ಫುಡ್‌ಸ್ಟ್ರೀಟ್ ಮಾಡುವ ಹಾಗೂ ಎಪಿಎಂಸಿ ಆವರಣದಲ್ಲಿ ಕೋಳಿ, ಮಾಂಸ ಹಾಗೂ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡುವ, ತೆಂಗಿನ ನಾರಿನ ಕಾರ್ಖಾನೆ ಜಾಗದಲ್ಲಿ ಬಸ್ ನಿಲ್ದಾಣ ಮಾಡುವ ರಾಷ್ಟ್ರೀಯ ಹೆದ್ದಾರಿಯ ಐದಾರು ಕಡೆ ತಂಗುದಾಣ ನಿರ್ಮಿಸುವ, ಮನೆ ಮನೆಗೆ ನಲ್ಲಿ ಹಾಕಿ ಶುದ್ಧ ಹಾಗೂ ಸಮರ್ಪಕ ನೀರು ಪೂರೈಸುವ ಚಿಂತನೆ ಇದೆ ಎಂದು ಅಧ್ಯಕ್ಷ ಕೆಎಂಎಲ್ ಕಿರಣ್ ತಿಳಿಸಿದರು.