ಸ್ಮಶಾನ ನಿರ್ಮಾಣಕ್ಕೆ ಸ್ಥಳೀಯರ ಆಕ್ರೋಶ

ಬೆಂಗಳೂರು, ಏ.೩೦- ಕೊರೊನಾ ಸೋಂಕಿತರ ಮೃತದೇಹಗಳನ್ನು ಸುಡಲು ಯಲಹಂಕದ ಮಾವಳ್ಳಿಪುರದ ತೆರೆದ ಸ್ಮಶಾನ ನಿರ್ಮಿಸುವ ಉದ್ದೇಶದಿಂದ ಸ್ಥಳದ ಪರಿಶೀಲನೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿ ಆಕ್ರೋಶ ಹೊರಹಾಕಿದರು.
ಇಲ್ಲಿನ ಮಾವಳ್ಳಿಪುರದಲ್ಲಿ ಪಾಲಿಕೆಗೆ ಸೇರಿದ ೨೦ ಎಕರೆ ಜಾಗವಿದ್ದು, ೨೦೧೨ರವರೆಗೂ ಸದರಿ ಜಾಗವನ್ನು ತ್ಯಾಜ್ಯ ಭೂಭರ್ತಿಗೆ ಬಳಸಿಕೊಳ್ಳಲಾಗುತ್ತಿತ್ತು. ಬಳಿಕ ವಾಯುಮಾಲಿನ್ಯ ವಿಚಾರವಾಗಿ ನ್ಯಾಯಾಲಯವು ಸದರಿ ಜಾಗದಲ್ಲಿ ತ್ಯಾಜ್ಯ ಸುರಿಯದಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಾಗ ಖಾಲಿಯಾಗಿಯೇ ಉಳಿದಿತ್ತು.
ನಗರದಲ್ಲಿ ಕೊರೋನಾ ಸೋಂಕಿತರ ಸಾವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮೃತದೇಹಗಳ ದಹನಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸದರಿ ಖಾಲಿ ಜಾಗದಲ್ಲಿ ಕೋವಿಡ್ ಮೃತದೇಹಗಳ ದಹನಕ್ಕೆ ತೆರೆದ ಸ್ಮಶಾನ ನಿರ್ಮಿಸಲು ಸದರಿ ಸ್ಥಳದ ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ಸದರಿ ಜಾಗದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.
ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ಸದರಿ ಜಾಗದ ಸುತ್ತಮುತ್ತ ೧೨ ಹಳ್ಳಿಗಳು ಬರುತ್ತವೆ. ಈಗಾಗಲೇ ವಾಯುಮಾನಿಲ್ಯ ದೃಷ್ಟಿಯಿಂದ ಈ ಜಾಗದಲ್ಲಿ ತ್ಯಾಜ್ಯವನ್ನು ಸುರಿಯದಂತೆ ನ್ಯಾಯಾಲಯದ ಆದೇಶಿಸಿದೆ.
ಇದೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಮೃತದೇಹಗಳನ್ನು ಇಲ್ಲಿ ದಹನ ಮಾಡುವುದರಿಂದ ಗ್ರಾಮಸ್ಥರಿಗೆ ಬಹಳ ಸಮಸ್ಯೆಯಾಗುತ್ತದೆ. ಅದರಲ್ಲೂ ಕೋವಿಡ್ ಸೋಂಕಿತರು ಮೃತದೇಹ ದಹನದಿಂದ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿ ಗ್ರಾಮಸ್ಥರಿಗೂ ಸೋಂಕು ಹರಡಲೂಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಬಿಬಿಎಂಪಿ ನಿರ್ಧಾರಕ್ಕೆ ಸ್ಥಳೀಯರಷ್ಟೇ ಅಲ್ಲದೆ, ದಲಿತ ಸಂಘರ್ಷ ಸಮಿತಿ ಹಾಗೂ ಪರಿಸರ ಬೆಂಬಲಿತ ಸಂಘ (ಇಎಸ್ ಜಿ) ಕೂಡ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸ್ಥಳದಲ್ಲಿ ಸತ್ತವರ ಅಂತ್ಯಸಂಸ್ಕಾರ ಮಾಡುವ ಆಲೋಚನೆಯೇ ಆಘಾತಕಾರಿಯಾಗಿದೆ ಎಂದು ಹೇಳಿವೆ.