ಸ್ಮಶಾನ ಕಾಯುವ ನೌಕರರ ಕೆಲಸ ಖಾಯಂ:ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿಂದು ಸ್ಮಶಾನ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಅವರ ಅಹವಾಲನ್ನು ಆಲಿಸಿದರು, ಸಚಿವರುಗಳಾದ ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ದೇವೇಂದ್ರನಾಥ್ ಉಪಸ್ಥಿತರಿದ್ದರು.

ಬೆಂಗಳೂರು,ಜ.೧೧-ರಾಜ್ಯದ ಸ್ಮಶಾನಗಳ ಕಾರ್ಮಿಕರನ್ನು ಖಾಯಂಗೊಳಿಸುವ ತೀರ್ಮಾನ ಮಾಡಲಾಗಿದೆ. ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸುವ ಆದೇಶವನ್ನು ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಅಧಿಕೃತ ನಿವಾಸದಲ್ಲಿಂದು ಸ್ಮಶಾನ ಕಾರ್ಮಿಕರ ಜತೆ ಉಪಾಹಾರ ಸೇವಿಸಿ ಮಾತನಾಡಿದ ಅವರು ಸ್ಮಶಾನ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ್ದೇನೆ. ಅವರಿಗೆ ಎಲ್ಲ ಸೌಲಭ್ಯ ಕೊಡುವ ನಿರ್ಧಾರ ಮಾಡಿದ್ದೇನೆ. ಬೆಂಗಳೂರಿನಲ್ಲಿ ೧೧೭ ಸ್ಮಶಾನ ಕಾರ್ಮಿಕರನ್ನು ಖಾಯಂ ಮಾಡಿದ್ದೇನೆ. ಉಳಿದವರಿಗೂ ಖಾಯಂ ನೇಮಕಾತಿ ಪತ್ರವನ್ನು ಶೀಘ್ರ ನೀಡಲಾಗುವುದು ಎಂದರು.
ಸ್ಮಶಾನ ಕಾರ್ಮಿಕರನ್ನು ಇನ್ನು ಮುಂದೆ ಸತ್ಯಹರಿಶ್ಚಂದ್ರ ಬಳಗ ಎಂದು ಕರೆಯಬೇಕು ಎಂದ ಅವರು, ಇಷ್ಟು ದಿನ ಸ್ಮಶಾನ ಕಾರ್ಮಿಕರ ಸಮಸ್ಯೆಗಳನ್ನು ಯಾವ ಸರ್ಕಾರವೂ ಕೇಳಿರಲಿಲ್ಲ. ನಮ್ಮದು ಬಡವರ ಪರ ಕಾಳಜಿ ಇರುವ ಸರ್ಕಾರ. ಕಾರ್ಮಿಕರು ಕೊಟ್ಟಿರುವಂತಹ ಸತ್ಯಹರಿಶ್ಚಂದ್ರ ಪ್ರತಿಮೆಯನ್ನು ದೇವರ ಮನೆಯಲ್ಲಿಡುತ್ತೇನೆ ಎಂದರು.