ಸ್ಮಶಾನದಲ್ಲಿ  ಕುವೆಂಪು ಜನ್ಮದಿನಾಚರಣೆ

ಹಿರಿಯೂರು.ಡಿ.31- ಕುವೆಂಪು ಗೆಳೆಯರ ಬಳಗ ಹಿರಿಯೂರು ವತಿಯಿಂದ ಕುವೆಂಪು ಜನ್ಮ ದಿನಾಚರಣೆಯನ್ನು ಹಿರಿಯೂರಿನ ನಂಜಯ್ಯನ  ಕೊಟ್ಟಿಗೆ ಸ್ಮಶಾನದಲ್ಲಿ ತಡರಾತ್ರಿ ಆಚರಿಸಲಾಯಿತು. ಕುವೆಂಪು ಗೆಳೆಯರ ಬಳಗದ ಅಧ್ಯಕ್ಷರಾದ ಡಾ.ಎಸ್ ಎಚ್ ಶಫಿವುಲ್ಲಾ ರವರು ಮಾತನಾಡಿ ಕುವೆಂಪುರವರು ವೈಚಾರಿಕ ಮತ್ತು ವೈಜ್ಞಾನಿಕ ವಿಚಾರಗಳ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ರಚನೆ ಮಾಡಿದವರು. ಸ್ಮಶಾನ ಎಂಬುದು ಒಂದು ಭಯವನ್ನುಂಟು ಮಾಡುವ ಸ್ಥಳ ಅಲ್ಲ.ಅದು ಭೂತ ಪ್ರೇತಗಳ ಅವಾಸವಲ್ಲ.ಅದೊಂದು ಪವಿತ್ರವಾದ ಜಾಗ. ನಿಷ್ಕಲ್ಮಶವಾದ ಮನಸ್ಸುಗಳುಳ್ಳ ನಿರ್ಜೀವ ದೇಹಗಳ ಒಂದು ತಾಣ ಎಂಬ ವೈಚಾರಿಕ ಹಿನ್ನೆಲೆ ಕುವೆಂಪುರವರದ್ದಾಗಿತ್ತು. ಈ ಮೂಲಕ ತಮ್ಮ ಸಾಹಿತ್ಯದಿಂದ ಕವಿ ಕುವೆಂಪುರವರು ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಸಮಾಜಕ್ಕೆ ಸಾರಿದ್ದಾರೆ ಹಾಗಾಗಿ ಅವರ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಕುರುಹಾಗಿ ಅವರ ಜನ್ಮದಿನವನ್ನು ಮೌಢ್ಯ ಮತ್ತು ಅಂಧ ಭಯದ ನಿವಾರಣೆಯ ಉದ್ದೇಶವನ್ನೊಳಗೊಂಡು ರಾಷ್ಟ್ರಕವಿ ಕುವೆಂಪುರವರ ಜನ್ಮದಿನವನ್ನು ಈ ತಡರಾತ್ರಿ ಸ್ಮಶಾನದಲ್ಲಿ ಆಚರಿಸುತ್ತಿದ್ದೇವೆ ಎಂದು ಅಧ್ಯಕ್ಷ ಡಾ.ಶಫಿಉಲ್ಲ ಹೇಳಿದರು.  ಹಾಗೇಯೇ ಬಳಗದ ಹಿರಿಯ ಪದಾಧಿಕಾರಿಗಳು ಹಾಗೂ ಉಪನ್ಯಾಸಕರಾದ  ತಿಪ್ಪೇಸ್ವಾಮಿ ಮಾರೇನಹಳ್ಳಿ ಇವರು ಕುವೆಂಪುರವರ ಆದರ್ಶವನ್ನು ಕುರಿತು ಮಾತನಾಡಿ ಅವರ ಕವಿತೆಯೊಂದನ್ನು ಹಾಡಿದರು. ಯಜ್ಞವಲ್ಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೇಣು ಹಾಗೂ ಶಿಕ್ಷಕರಾದ ಚಿತ್ರಗಿರಿಯಪ್ಪ ಮಾತನಾಡಿದರು.ಕನ್ನಡ ಉಪನ್ಯಾಸಕರಾದ ಹನುಮಂತರಾಯಪ್ಪ ಕುವೆಂಪುರವರ ಹಸಿರು ಪದ್ಯವನ್ನು ಹಾಡಿದರು. ಗಣಿತ ಉಪನ್ಯಾಸಕರದ ಪ್ರವೀಣ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿದರು. ಭೌತಶಾಸ್ತ್ರ ಉಪನ್ಯಾಸಕರಾದ ಮಹಂತೇಶ್ ಸರ್ವರನ್ನು ಸ್ವಾಗತಿಸಿದರು. ನಂಜಯ್ಯನ ಕೊಟ್ಟಿಗೆ ನಿವಾಸಿಗಳು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.