ಸ್ಫೋಟಕಗಳ ಸಂಗ್ರಹಣೆ ನಿರಾಣಿ ಎಚ್ಚರಿಕೆ

ಬೆಂಗಳೂರು, ಮಾ. ೨೩- ಅನಧಿಕೃತವಾಗಿ ಸ್ಪೋಟಕಗಳನ್ನು ಸಂಗ್ರಹಿಸಿರುವವರು ಕೂಡಲೇ ಅದನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ನಿರಾಣಿ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಸ್ಪೋಟಗಳನ್ನು ಸಂಗ್ರಹಿಸುವವರು ಅದನ್ನು ಸಾಗಾಣೆ ಮಾಡುವವರು ಸಂಗ್ರಹಿಸುವವರ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ವಿಜಯಸಿಂಗ್ ಪರವಾಗಿ ಅರವಿಂದ ಅರಳಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಸರಬರಾಜಾಗುವ ಸ್ಪೋಟಕಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೆಲವು ಕಡೆ ಎಫ್‌ಐಆರ್ ಕೂಡಾ ದಾಖಲು ಮಾಡಲಾಗಿದೆ ಎಂದರು.
ಬೀದರ್ ತಾಲ್ಲೂಕಿನ ಸುಲ್ತಾನ್ ಪುರ ಬಳಿ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ೧೬ ಕ್ವಿಂಟಾಲ್ ಜಿಲಿಟಿನ್ ಅಕ್ರಮವಾಗಿ ಸಂಗ್ರಹಿಸಿಟ್ಟಿದನ್ನು ವಶಪಡಿಸಿಕೊಳ್ಳಲಾಗಿದ್ದು, ಗಣಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಅವರು ಹೇಳಿದರು.
ಸಣ್ಣ ಕೈಗಾರಿಕೆಗಳಿಗೆ ಆದ್ಯತೆ
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಶಶಿಲ್ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಣ್ಣ ಕೈಗಾರಿಕೆಗಳಿಗೆ ಇದುವರೆಗೂ ಬಾಕಿ ಇದ್ದ ೧೪೭ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ೨೨೭ ಘಟಕಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ ಅಂಗೀಕಾರವಾದ ಬಳಿಕ ಎಲ್ಲ ಬಾಕಿ ನೀಡಲಾಗುವುದು ಎಂದರು.

ಅನಧಿಕೃತ ಫಲಕ ತೆರವು
ಕಲಬುರಗಿ ನಗರದಲ್ಲಿ ೧೧೧ ಜಾಹೀರಾತು ಫಲಗಳಿದ್ದು, ಇವುಗಳಲ್ಲಿ ೨೭ ಅನಧಿಕೃತ ತೆರವಿಗೆ ಸೂಚಿಸಲಾಗಿದೆ ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಪರವಾಗಿ ಸಭಾನಾಯಕ ಕೋಟಾಶ್ರೀನಿವಾಸಪೂಜಾರಿ ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸುನೀಲ್ ವಲ್ಲಾಪುರೆ ಪರವಾಗಿ ಶಶಿಲ್ ನಮೋಶಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಾನಗರ ಪಾಲಿಕೆ ಮೂಲಕ ಅನಧಿಕೃತ ಫಲಕ ತೆರವು ಮಾಡಲಾಗುವುದು ಎಂದು ಹೇಳಿದರು.

ಉಪ್ಪುಮಿಶ್ರಿತ ಮರಳು ದಿಬ್ಬಗಳನ್ನು ಗುರುತಿಸಿ ಯೋಗ್ಯವಾದ ದಿಬ್ಬಗಳಿಂದ ಮರಳು ತೆಗೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ನಿರಾಣಿ ತಿಳಿಸಿದ್ದಾರೆ.
ಕೆ. ಪ್ರತಾಪಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೂಕ್ತವಾದ ದಿಬ್ಬಗಳನ್ನು ಮಾತ್ರ ಹರಾಜಿಗೆ ನೀಡಲಾಗುತ್ತದೆ. ಹರಾಜಿಗೂ ನೀಡುವ ಮುನ್ನ ಅದರ ಗುಣಮಟ್ಟ ಪರೀಕ್ಷೆ ಮಾಡಿಯೇ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.