ಸ್ಪೋಟಕಗಳ ಬಳಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ, ಜ7- ತಾಲೂಕಿನ ಆದರಳ್ಳಿ ಗ್ರಾಮದ ಸೋಗಿಹಾಳ ಸಮೀಪದ ರಿ.ಸ ನಂ 29ರಲ್ಲಿ ಪ್ರತಿಷ್ಠಿತರೋರ್ವರಿಗೆ ಸೇರಿರುವ ಸ್ಟೋನ್ ಕ್ರಶ್ ನವನವರು ಗುಡ್ಡದಿಂದ ಕಲ್ಲುಗಳನ್ನು ಬೇರ್ಪಡಿಸಲು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ನೂರಾರು ಎಕರೆ ಜಮೀನುಗಳ ರೈತರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಇವುಗಳನ್ನು ಸ್ಥಗಿತಗೊಳಿಸುವಂತೆ ಮಂಗಳವಾರ ಆದರಳ್ಳಿ ಗ್ರಾಮದ ರೈತರು ತಹಶೀಲ್ದಾರ್ ಬ್ರಮರಾಂಭಾ ಗುಬ್ಬಿಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಭಾರೀ ಸ್ಫೋಟಕಗಳ ರಭಸದಿಂದಾಗಿ ದೊಡ್ಡ ದೊಡ್ಡ ಕಲ್ಲುಗಳು ಸಿಡಿದು ಜಮೀನುಗಳಲ್ಲಿ ಬೀಳುತ್ತಿದ್ದು ರೈತರು, ಕೃಷಿ ಕೂಲಿ ಕಾರ್ಮಿಕರು ಮತ್ತು ಜಾನುವಾರುಗಳು ಪ್ರತಿನಿತ್ಯವೂ ಜೀವಭಯದಲ್ಲಿಯೇ ಬದುಕು ಸಾಗಿಸಬೇಕಾಗಿದೆ.
ಅಲ್ಪ ಸ್ವಲ್ಪ ಜಮೀನು ಹೊಂದಿರುವ ರೈತರಿಗೆ ಭಯದ ವಾತಾವರಣ ನಿರ್ಮಿಸಿ ಹೇಗಾದರೂ ಮಾಡಿ ಇಡೀ ಪ್ರದೇಶವನ್ನೇ ಆಕ್ರಮಿಸುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಕಳೆದ ನಾಲ್ಕು ವರ್ಷಗಳಿಂದಲ್ಲೂ ಕಲ್ಲು ಗಣಿಗಾರಿಕೆ ಮಾಲೀಕರಿಗೆ, ಗಣಿ ಮತ್ತು ಭೂ ಗರ್ಭ ಇಲಾಖೆ ಅಧಿಕಾರಿಗಳಿಗೆ ವಿನಂತಿಸಿಕೊಂಡ್ಡಿದರೂ ರೈತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ.
ಬಳಸುವ ಸ್ಪೋಟಕಗಳು, ರಾಸಾಯನಿಕಗಳು, ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮತ್ತು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.