ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್

ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಇಂದು ನಾಮಪತ್ರ ಸಲ್ಲಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಇದ್ದಾರೆ.

ಬೆಂಗಳೂರು, ಮೇ ೨೩- ರಾಜ್ಯ ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಯು.ಟಿ. ಖಾದರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್‌ರವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ್ದು, ಇಂದು ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ ಇವರುಗಳ ಹೆಸರುಗಳು ಕೇಳಿ ಬಂದಿತ್ತಾದರೂ ವಿಧಾನಸಭಾಧ್ಯಕ್ಷರಾಗಲು ಬಹುತೇಕ ಹಿರಿಯ ಶಾಸಕರು ಒಪ್ಪದ ಕಾರಣ ವರಿಷ್ಠರು ಅದಕ್ಕೆ ಯು.ಟಿ. ಖಾದರ್ ಅವರ ಮನವೊಲಿಸಿದ್ದು, ಯು.ಟಿ. ಖಾದರ್ ನೂತನ ವಿಧಾನಸಭಾಧ್ಯಕ್ಷರಾಗಲಿದ್ದಾರೆ.
ನಿನ್ನೆ ರಾತ್ರಿ ಯು.ಟಿ. ಖಾದರ್ ಅವರ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಚರ್ಚೆ ನಡೆಸಿ ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಂತೆ ಅವರ ಮನವೊಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾದರ್ ಅವರ ಜತೆ ಮಾತನಾಡಿ ವಿಧಾನಸಭಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಮನವೊಲಿಸಿದ್ದು, ಇದಕ್ಕೆ ಯು.ಟಿ. ಖಾದರ್ ಸಮ್ಮತಿಸಿದ್ದಾರೆ.
ಸಚಿವರಾಗುವ ಆಸೆ ಹೊಂದಿದ್ದ ಯು.ಟಿ. ಖಾದರ್ ವರಿಷ್ಠರ ಸೂಚನೆಯಂತೆ ವಿಧಾನಸಭಾಧ್ಯಕ್ಷರಾಗಲು ಒಪ್ಪಿಗೆ ಸೂಚಿಸಿದ್ದಾರೆ.
ನಾಳೆ ಚುನಾವಣೆ: ಆಯ್ಕೆ
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಿಗದಿಯಾಗಿದ್ದು, ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್ ಅವರು ತಮ್ಮ ನಾಮಪತ್ರವನ್ನು ನಾಳೆ ಸಲ್ಲಿಸುವರು.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ವಿಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನಗಳನ್ನು ಮಾಡಿಲ್ಲ. ಹಾಗಾಗಿ ಯು.ಟಿ. ಖಾದರ್ ಅವಿರೋಧವಾಗಿ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ಹೈಕಮಾಂಡ್‌ನ ಸೂಚನೆಯಂತೆ ಸ್ಫೀಕರ್ ಆಗಲು ಒಪ್ಪಿದ್ದೇನೆ. ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ. ಆದರೆ, ವಿಧಾನಸಭಾಧ್ಯಕ್ಷರ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ ಎಂದು ಯು.ಟಿ ಖಾದರ್ ಹೇಳಿದರು.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಚರ್ಚೆ ಮಾಡಿ ನನ್ನನ್ನು ಸ್ಪೀಕರ್ ಸ್ಥಾನಕ್ಕೆ ಪಕ್ಷದಿಂದ ನಾಮಪತ್ರ ಸಲ್ಲಿಸಲು ಹೇಳಿದ್ದರು. ಅದರಂತೆ ನಾಮಪತ್ರ ಹಾಕಿದ್ದೇನೆ ಎಂದರು.
ಯು.ಟಿ. ಖಾದರ್ ಪರಿಚಯ
ಯು.ಟಿ. ಖಾದರ್ ಅವರು ಬಿ.ಎ. ಎಲ್‌ಎಲ್‌ಬಿ ಪದವೀಧರರಾಗಿದ್ದು, ಇವರ ತಂದೆ ಯು.ಟಿ. ಫರೀದ್ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಯು.ಟಿ. ಖಾದರ್ ೧೯೯೦ ರಲ್ಲಿ ರಾಜಕಾರಣ ಪ್ರವೇಶ ಮಾಡಿ, ಮಂಗಳೂರು ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
೨೦೦೮ ರಲ್ಲಿ ತಮ್ಮ ತಂದೆಯ ನಿಧನ ನಂತರ ತೆರವಾದ ಶಾಸಕ ಸ್ಥಾನಕ್ಕೆ ಮಂಗಳೂರಿನ ಉಳ್ಳಾಲ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ನಂತರ ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಹಾಗೆಯೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
೨೦೨೧ ರಿಂದ ೨೩ರ ವರೆಗೆ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಯು.ಟಿ. ಖಾದರ್ ಕಾರ್ಯನಿರ್ವಹಿಸಿದ್ದರು.