ಸ್ಪಷ್ಟ ವರದಿ ನೀಡುವಂತೆ ಶಾಸಕರಿಂದ ಸೂಚನೆ

ಬ್ಯಾಡಗಿ, ನ 22- ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ಭೂರಹಿತ ಜನರು ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಮೊದಲ ಆದ್ಯತೆ ನೀಡುವ ಮೂಲಕ ಪಟ್ಟಾ ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಈ ನಿಟ್ಟಿನಲ್ಲಿ ಸಾಗುವಳಿ ಮಾಡುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಇದೇ ದಿ. 30 ರೊಳಗಾಗಿ ಸ್ಪಷ್ಟ ವರದಿ ನೀಡುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ತಹಶೀಲ್ದಾರರಿಗೆ ಸೂಚಿಸಿದರು.
ಸ್ಥಳೀಯ ತಾಲೂಕಾ ಕಚೇರಿಯಲ್ಲಿ ಜರುಗಿದ ಅಕ್ರಮ ಸಕ್ರಮ (ಬಗರ್ ಹುಕುಂ) ಸಾಗುವಳಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ಭೂರಹಿತ ಜನರನ್ನು ಗುರುತಿಸಿ ಅದರ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಮುಂದಿನ ಸಭೆಯ ಒಳಗಾಗಿ ನೀಡಲು ತುರ್ತು ಕ್ರಮ ಕೈಗೊಳ್ಳಲು ತಹಶೀಲ್ದಾರ ಅವರಿಗೆ ತಿಳಿಸಿದರಲ್ಲದೆ ಹಿರೇಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಜಮೀನನ್ನು ಗ್ರಾಮಸ್ಥರ ಬೇಡಿಕೆಯಂತೆ ನೀಡಿರುವ ಲೋಣಿಮಠ ಭೂರಹಿತರಾಗಿದ್ದು, ಸದ್ಯ ಅವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನನ್ನು ಅವರಿಗೆ ಮಂಜೂರು ಮಾಡುವ ನಿಟ್ಟಿನಲ್ಲಿ ಅಗತ್ಯ ದಾಖಲೆಗಳೊಂದಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿ, ತಾಲೂಕಿನಲ್ಲಿ ಈವರೆಗೂ 237 ಜನರು ಫಾರಂ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಇಲಾಖೆಯಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ಮಾಡುತ್ತಿರುವ ಕುರಿತು ಸಭೆಯ ಗಮನಕ್ಕೆ ತರುವ ಮೂಲಕ ಎಲ್ಲ ಅರ್ಜಿಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಸಿದ್ದಯ್ಯ ಪಾಟೀಲ ಹಾಗೂ ಸುರೇಶ ಕಳ್ಳಿಮನಿ ಮಾತನಾಡಿ, ತಾಲೂಕಿನ ಘಾಳಪೂಜಿ, ಮೊಟೆಬೆನ್ನೂರ, ಕೆಂಗೊಂಡ ಹಾಗೂ ಬಿಸಲಹಳ್ಳಿ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ಜನರು ಈ ಹಿಂದೆ ಫಾರಂ ನಂಬರ್ 53 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಕೂಡ ಈವರೆಗೂ ಅವರಿಗೆ ಪಟ್ಟಾ ನೀಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಪಟ್ಟಾ ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕಾಗಿನೆಲೆ ಹೋಬಳಿಯ ಉಪ ತಹಶೀಲ್ದಾರ ರವಿ ಬೋಗಾರ, ತಾಲೂಕಾ ಶಿರಸ್ತೇದಾರ ಗಣೇಶ ಕಟ್ಟಿಮನಿ, ರಾಜಪ್ಪ ಬಂಕಾಪುರ, ಬ್ಯಾಡಗಿ ಮತ್ತು ಕಾಗಿನೆಲೆ ಹೋಬಳಿಯ ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಸಾಜಾಗಳ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.