ಸ್ಪಷ್ಟ ಗುರಿ, ನಿರಂತರ ಪರಿಶ್ರಮಗಳೇ ಶಿಕ್ಷಣದ ಮೂಲ ಮಂತ್ರಗಳು

ಮಾನ್ವಿ,ಜೂ.೨೫-
ಝೇವಿಯರ್ ಶಾಲೆಯಲ್ಲಿ ನಡೆದ ನೂತನ ಶೈಕ್ಷಣಿಕ ವರ್ಷಾರಂಭ ಹಾಗೂ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೊಯೋಲ ಸಂಸ್ಥೆಯ ಮುಖ್ಯಸ್ಥರಾದ ವಂ. ಫಾ. ಲೀಯೊ ಪಿರೇರಾ ಅವರು ಒಂದು ಸಮಾಜದ ಏಳಿಗೆಗೆ ಶಿಕ್ಷಣ ಎಷ್ಟು ಮುಖ್ಯವೋ, ಅಷ್ಟೇ ಅಗತ್ಯವಾಗಿ ಸ್ಪಷ್ಟ ಗುರಿ ಮತ್ತು ನಿರಂತರ ಪರಿಶ್ರಮಗಳು ವಿದ್ಯಾರ್ಥಿಗಳಲ್ಲಿ ಮೂಲ ಮಂತ್ರಗಳಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಮುಖ್ಯ ಅತಿಥಿ ಹಾಗೂ ಝೇವಿಯರ್ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ಸಾಕ್ಷಿ ಹಿರೇಮಠ, ‘ನಲಿವಿನೊಂದಿಗೆ ಕಲಿವು ಇಂದು ಅತ್ಯಗತ್ಯ, ಝೇವಿಯರ್ ಶಾಲೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ತಕ್ಕ ಪರಿಸರ ಹೊಂದಿದ ಶಾಲೆ’ ಎಂದು ತಮ್ಮ ಅನುಭವ ಹಂಚಿಕೊಂಡರಲ್ಲದೇ, ಒಂದೊಮ್ಮೆ ನಾನೂ ಕೂಡಾ ಈ ಶಾಲೆಯ ವಿದ್ಯಾರ್ಥಿ ನಾಯಕಿಯಾಗಿದ್ದೆ. ಇಂದು ನಾನು ವೈದ್ಯೆಯಾಗಿರುವ ನನ್ನ ಸಾಧನೆಯ ಹಿಂದೆ ಈ ಸಂಸ್ಥೆಯ ಅಮೋಘ ಶಿಕ್ಷಣದ ಸೇವೆಯಿದೆ ಎಂದು ಅಭಿಪ್ರಾಯಪಟ್ಟರು. ಶಾಲೆಯ ನೂತನ ವಿದ್ಯಾರ್ಥಿ ನಾಯಕರಾಗಿ ಜೀವನ್ ಹಾಗೂ ಪ್ರಿಯಾಂಕ ಅವರ ತಂಡ ಪ್ರಮಾಣ ವಚನ ಸ್ವೀಕರಿಸಿತು. ಈ ವೇಳೆ ಝೇವಿಯರ್ ಶಾಲೆಯ ಪ್ರಾಚಾರ್ಯರಾದ ವಂ. ಫಾ. ವಿಲ್ಸನ್ ಬೆನ್ನಿಸ್, ವಂ. ಫಾ. ಮ್ಯಾಕ್ಸಿಮ್ ರಸ್ಕಿನ್ಹಾ, ಉಪ ಪ್ರಾಚಾರ್ಯ ಬಸವರಾಜ್ ಹೃತ್ಸಾಕ್ಷಿ ಮತ್ತು ಎಲ್ಲಾ ಸಿಬ್ಬಂಧಿ ಉಪಸ್ಥಿತರಿದ್ದರು.