ಸ್ಪಷ್ಟತೆ ಇದ್ದರೆ ಗುರಿ ಸಾಧನೆ ಸುಲಭ: ಡಾ.ಮನಿಷಾ

ಕಲಬುರಗಿ,ಜು.16: ಯಾವುದೇ ಗುರಿ ಕೈಗೂಡಬೇಕಾದರೆ ನಮಗೆ ಮೊದಲು ಸ್ಪಷ್ಟತೆ ಇರಬೇಕು ಎಂದು ಖಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮನಿಷಾ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಸಾಧನೆಗಾಗಿ ಉತ್ತೇಜನ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ವಿಷಯದ ಕುರಿತಾದ ಕೌಶಲ ಮತ್ತು ನಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದ ಕುರಿತಾಗಿ ಸ್ಪಷ್ಟತೆ ಇರುವಂತೆ ಎಚ್ಚರ ವಹಿಸಬೇಕು. ಅಂದಾಗಲೇ ಸಾಧನೆಗೆ ಅಗತ್ಯ ಎನಿಸುವ ಆತ್ಮವಿಶ್ವಾಸ ನಮ್ಮೊಳಗೆ ಜಾಗೃತಗೊಳ್ಳುತ್ತದೆ ಎಂದರು.
ನಮ್ಮ ಮೆದುಳು ನಾವು ಏನನ್ನು ಪದೇಪದೆ ಮಾಡುತ್ತೇವೋ ಅದಕ್ಕೆ ಒಗ್ಗಿ ಹೋಗುತ್ತದೆ. ಆ ಕಾರಣಕ್ಕಾಗಿ ಶಿಸ್ತು ಮತ್ತು ಸಮಯ ಪಾಲನೆಗೆ ಒತ್ತು ನೀಡುವುದನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿಗಳು ಒತ್ತು ನೀಡಬೇಕೆಂದು ಅವರು ಆಪ್ತ ಸಲಹೆ ನೀಡಿದರು.
ಅನಗತ್ಯ ಗೊಂದಲಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಮೇಲಾಗಿ, ಸಹಪಾಠಿಗಳ ಜೊತೆಗೆ ಸ್ಪರ್ಧೆಗೆ ಇಳಿಯುವುದಕ್ಕಿಂತಲೂ ಅವರೊಂದಿಗೆ ಚರ್ಚಿಸಿ ಪರಸ್ಪರ ವಿಷಯ ಮತ್ತು ಜ್ಞಾನ ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು ಎಂದರು.
ಉಪನ್ಯಾಸದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ.ಮನಿಷಾ ಪಾಟೀಲ್ ಉತ್ತರಿಸಿದರು. ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಡಾ.ಮನಿಷಾ ಬಹುಮಾನಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಇಂಗ್ಲಿಷ್ ಶಿಕ್ಷಕಿ ಅಂಬಿಕಾ ರೆಡ್ಡಿ ವೇದಿಕೆಯಲ್ಲಿದ್ದರು. ವಿಜ್ಞಾನ ಶಿಕ್ಷಕ ನಿಖಿಲ್ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಶಿಕ್ಷಕ ಆನಂದ ಔರಾದಕರ್ ವಂದಿಸಿದರು.