ಸ್ಪರ್ಶ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಲಭ್ಯ

ಕಲಬುರಗಿ,ಮೇ.19: ನಗರದ ಸೇಡಂ ರಸ್ತೆಯಲ್ಲಿರುವ ಬೆಂಗಳೂರು ಮೂಲದ ಸೂಪರ್ ಸ್ಪೆಶಾಲಿಟಿ ಸ್ಪರ್ಶ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ವೈದ್ಯರು ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಕ ಸಮರ್ಥ ಆರ್ಯ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಣಕಾಲು ಮತ್ತು ಸೊಂಟ ಸೇರಿ ಕೀಲು ನೋವುಗಳ ನಿವಾರಣೆಗಾಗಿ ರೋಬೋಟಿಕ್ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದರು. ಆ ಮೂಲಕ ರಕ್ತಸ್ರಾವ, ನೋವು ಕಡಿಮೆ ಪ್ರಮಾಣದಲ್ಲಿ ಆಗುವುದಲ್ಲದೇ ಅತ್ಯಂತ ಕಡಿಮೆ ಅವಧಿಯಲ್ಲಿ ಗುಣಮುಖರಾಗುವರು ಎಂದರು.
ಸಿಟಿ ಸ್ಕ್ಯಾನಿಂಗ್ ಮೂಲಕ ರೋಬೋಟಿಕ್ ಶಸ್ತ್ರ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತಿದೆ. ಇದರಿಂದಾಗಿ ಮುರಿತದ ಸ್ಥಳದಲ್ಲಿ ಎಲುವನ್ನು ದೇಹದ ಬೇರೆ ಭಾಗದಿಂದ ತೆಗೆದುಕೊಂಡು ಜೋಡಿಸಬೇಕಾಗುತ್ತದೆ. ಹಾಗಾಗಿ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಎಲುವು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿ ಮಾಂಸ, ಕಾಂಡಗಳಲ್ಲಿಯೂ ಸಹ ಕಡಿಮೆಯಾಗುತ್ತದೆ. ರಕ್ತಸ್ರಾವ ಹಾಗೂ ನೋವು ಕಡಿಮೆಯಾಗುತ್ತದೆ. ಈ ಶಸ್ತ್ರಚಿಕಿತ್ಸೆಯಿಂದಾಗಿ ಸಂಜೆ ಇಲ್ಲವೇ ಮರುದಿನವೇ ನಡೆದಾಡಬಹುದಾಗಿದೆ. ಆರು ವಾರಗಳಲ್ಲಿ ಗುಣಮುಖವಾಗಬೇಕಿದ್ದ ಅವಧಿ ಕೇವಲ ಮೂರು ವಾರಗಳಲ್ಲಿ ಸಂಪೂರ್ಣ ಗುಣಮುಖರಾಗುವರು ಎಂದು ಅವರು ಹೇಳಿದರು.
ಸ್ಪರ್ಶ ಆಸ್ಪತ್ರೆಯು ಕಳೆದ 17 ವರ್ಷಗಳಿಂದಲೂ ರಾಜ್ಯಾದ್ಯಂತ ಬೃಹತ್ ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಬಲಿಷ್ಠ ನಾಯಕತ್ವ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ಅತ್ಯಂತ ಸುಧಾರಿತ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಸುಮಾರು ಆರ್ಥೋಪೆಡಿಕ್, ನ್ಯೂರೋಸೈನ್ಸ್, ಆರ್ಗನ್ ಟ್ರಾನ್ಸ್‍ಪ್ಲ್ಯಾಂಟ್ಸ್ ಮತ್ತು ಮಹಿಳಾ ಮತ್ತು ಮಕ್ಕಳೂ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಡಾ. ಶರಣ್ ಪಾಟೀಲ್ ಅವರ ನೇತೃತ್ವದಲ್ಲಿ ಸುಮಾರು 35 ವಿಶೇಷ ಶಸ್ತ್ರಚಿಕಿತ್ಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 220ಕ್ಕಿಂತ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಒಟ್ಟು ಐದು ಸ್ಪರ್ಶ ಆಸ್ಪತ್ರೆಗಳು ಇದ್ದು, ಅವುಗಳಲ್ಲಿ ಬೆಂಗಳೂರಿನಲ್ಲಿ ಮೂರು, ದಾವಣಗೆರೆ, ಹಾಸನ್‍ಗಳಲ್ಲಿ ತಲಾ ಒಂದು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಎರಡು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು ಎರಡು ಮಿಲಿಯನ್ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ಬಾಲಪ್ಪಗೌಡ ಮುಂತಾದವರು ಉಪಸ್ಥಿತರಿದ್ದರು.