ಸ್ಪರ್ಧೆಯಿಂದ ಹಿಂದೆಸರಿದ ರಾನ್: ಟ್ರಂಪ್‌ಗೆ ಮತ್ತೊಂದು ಮುನ್ನಡೆ

ನ್ಯೂಜೆರ್ಸಿ, ಜ.೨೨- ನವೆಂಬರ್‌ನಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಮುನ್ನಡೆ ಸಾಧಿಸಿದ್ದಾರೆ. ನ್ಯೂ ಹ್ಯಾಂಪ್‌ಶೈರ್‌ನಲ್ಲಿ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಗೆ ಮುಂಚಿತವಾಗಿ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ್ದು, ಟ್ರಂಪ್ ಅವರನ್ನು ಅನುಮೋದಿಸಿದ್ದಾರೆ. ಸದ್ಯ ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್‌ಗೆ ನಿಕಿ ಹ್ಯಾಲೆ ಏಕಮಾತ್ರ ಪ್ರತಿಸ್ಪರ್ಧಿಯಾಗಿದ್ದಾರೆ.
ಪ್ರಸಕ್ತ ವರ್ಷಾಂತ್ಯಕ್ಕೆ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಸದ್ಯ ರಿಪಬ್ಲಿಕನ್ ಪಕ್ಷದಲ್ಲೇ ಪ್ರಾಥಮಿಕ ಚುನಾವಣೆ ನಡೆಯುತ್ತಿದೆ. ಇಲ್ಲಿ ಮುನ್ನಡೆ ಸಾಧಿಸುವ ಅಭ್ಯರ್ಥಿಯನ್ನು ರಿಪಬ್ಲಿಕನ್ ಪಕ್ಷ ತನ್ನ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸುತ್ತದೆ. ಇದರ ಭಾಗವಾಗಿ ಅಯೋವಾದಲ್ಲಿ ನಡೆದ ಮೊದಲ ಹಂತದ ಪ್ರಾಥಮಿಕ ಚುನಾವಣೆಯಲ್ಲಿ ಕೂಡ ಟ್ರಂಪ್ ಉತ್ತಮ ಮುನ್ನಡೆ ಸಾಧಿಸಿದ್ದರು. ಅಲ್ಲದೆ ಈಗಾಗಲೇ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ರಿಪಬ್ಲಿಕನ್ ಸ್ಪರ್ಧೆಯಿಂದ ಹೊರಗುಳಿದಿದ್ದು, ಇದೀಗ ಫ್ಲೊರಿಡಾ ಗವರ್ನರ್ ರಾನ್ ಅವರು ಕೂಡ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಗೆ ಮುಂಚಿತವಾಗಿ ಹೊರಗುಳಿಯಲು ನಿರ್ಧರಿಸಿದ್ದಾರೆ. ಸದ್ಯ ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್‌ಗೆ ನಿಕಿ ಹ್ಯಾಲೆ ಉಳಿದಿರುವ ಏಕಮಾತ್ರ ವಿರೋಧಿ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಹ್ಯಾಲೆ ವಿರುದ್ಧ ಕೂಡ ಟ್ರಂಪ್ ಸುಲಭ ಅಂತರದಲ್ಲೇ ಗೆದ್ದುಕೊಂಡು, ರಿಪಬ್ಲಿಕನ್ ಪಕ್ಷದ ಸರ್ವಾನುಮತ ಅಭ್ಯರ್ಥಿಯಾಗಿ ಅಯ್ಕೆಯಾಗುವ ಎಲ್ಲಾ ಸಾಧ್ಯತೆ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಆಗ ರಿಪಬ್ಲಿಕನ್ ಪಕ್ಷದ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ನಡುವೆ ನೇರ ಹಣಾಹಣಿ ನಡೆಯಲಿದೆ. ಮಂಗಳವಾರ ನ್ಯೂಹ್ಯಾಂಪ್‌ಶೈರ್‌ನಲ್ಲಿ ಎರಡನೇ ಬಾರಿಯ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆ ನಡೆಯಲಿದೆ. ಅಯೋವಾದಲ್ಲಿ ನಡೆದ ಮೊದಲ ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್ ಮೊದಲ ಸ್ಥಾನಿಯಾಗಿದ್ದರೆ ರಾನ್ ಡಿಸಾಂಟಿಸ್ ಎರಡನೇ ಸ್ಥಾನ ಪಡೆದುಕೊಂಡಿದ್ದರು.