ಸ್ಪರ್ಧಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಗ್ರಂಥಾಲಯ ಅತ್ಯವಶ್ಯ

ಸೈದಾಪುರ:ಮೇ.14:ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಗ್ರಂಥಾಲಯ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನದ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.

ಸಮೀಪದ ಕೂಡಲೂರು ಗ್ರಾಮದಲ್ಲಿ ಸ್ಥಾಪಿಸಲಾದ ಶ್ರೀ ಬಸವಲಿಂಗೇಶ್ವರ ಗ್ರಂಥಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಶ್ರೀಗಳು, ಮಠ-ಮಂದಿರಗಳು ಆದ್ಯಾತ್ಮಿಕ ಚಿಂತನೆಗಳ ಮೂಲಕ ಮಾನಸಿಕ ನೆಮ್ಮದಿ ನೀಡಿದರೆ ಗ್ರಂಥಾಲಯಗಳು ವ್ಯಕ್ತಿ ಜ್ಞಾನಾರ್ಜನೆಗೆ ಅತ್ಯುಪಯುಕ್ತವಾಗಿವೆ. ಮನುಷ್ಯ ಕಳೆದುಕೊಳ್ಳಲಾಗದ ಅತಿ ದೊಡ್ಡ ಸಂಪತ್ತಾದ ಜ್ಞಾನವನ್ನು ಕೇವಲ ಓದಿನಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯ, ದುಡ್ಡಿನಿಂದ ಕೊಂಡುಕೊಳ್ಳಲಾಗದು ಎಂದರು.

ಬಡತನ ಕಾರಣಕ್ಕೆ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಪಟ್ಟಣಕ್ಕೆ ಹೋಗಿ ಅಭ್ಯಾಸ ಮಾಡುವುದು ಕಷ್ಟಕರ ಇದನ್ನು ಮನಗಂಡ ಕೂಡಲೂರು ಗ್ರಾಮದ ಪ್ರಜ್ಞಾವಂತ ಜನ ಗ್ರಂಥಾಲಯ ಸ್ಥಾಪನೆಗೆ ತನು ಮನ ಧನ ಸಹಾಯ ಮಾಡಿದ್ದನ್ನು ಪದಗಳಲ್ಲಿ ವರ್ಣಿಸಲಾಗದು ಅವರ ವಿಶಾಲ ಹೃದಯಕ್ಕೆ ಭಗವಂತ ಖಂಡಿತ ಒಳಿತು ಮಾಡುತ್ತಾನೆ ಎಂದು ಅಶೀರ್ವದಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡುವ ಮುಖಾಂತರ ಸರಕಾರಿ ನೌಕರಿಯನ್ನು ಪಡೆದುಕೊಂಡು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿಯನ್ನು ಸುಧಾರಿಸಿಕೊಳ್ಳುವುದರ ಜತೆಗೆ ಇದೇ ರೀತಿ ಇತರ ವಿದ್ಯಾರ್ಥಿಗಳ ಓದಿಗೆ ಸಹಾಯ ಸಹಕಾರ ಮಾಡುವಂತೆ ಕಿವಿ ಮಾತು ಹೇಳಿದರು.

ಈ ವೇಳೆ ಬಂದಯ್ಯ ಸ್ವಾಮಿ ಮಠದ, ಅಮರೇಶ ನಾಯಕ, ಹಣಮಂತರಾಯ ಮಹಾದೇವ, ಅನೀಲ, ತಿಮ್ಮಪ್ಪ, ಸಾಬರೆಡ್ಡಿ, ಶ್ರೀಶೈಲ, ಯಂಕಪ್ಪ, ಭಾಷಾಜೀ, ರಾಕೇಶ, ಯೋಗೇಶ ಸೇರಿದಂತೆ ಮುಂತಾದವರಿದ್ದರು.

ಮನೆಗೊಬ್ಬ ಸರಕಾರಿ ನೌಕರ ನಮ್ಮ ಧ್ಯೇಯ

ಕೂಡಲೂರು ಗ್ರಾಮದ ಬಡವ ಶ್ರೀಮಂತ ಎಂಬ ಬೇದವಿಲ್ಲದೆ ಕನಿಷ್ಟ ಮನೆಗೊಬ್ಬ ಸರಕಾರಿ ನೌಕರನನ್ನು ಹುಟ್ಟು ಹಾಕಬೇಕು ಎಂಬ ಧ್ಯೇಯದೊಂದಿಗೆ ಗ್ರಾಮಸ್ಥರು ಓದುಗರ ಅನುಕೂಲಕ್ಕಾಗಿ ಸ್ವಯಂ ಗ್ರಂಥಾಲಯ ಸ್ಥಾಪನೆ ಮಾಡಿದ್ದಾರೆ. ಈಗಾಗಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಜತೆಗೆ ಪ್ರತಿನಿತ್ಯ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳ ವ್ಯವಸ್ಥೆ ಮಾಡಿಕೊಂಡಿದ್ದು, ಸ್ಪರ್ಧಾರ್ಥಿಗಳ ಅಬ್ಯಾಸಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸಲಾಗಿದೆ.