ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪; ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಪೋಷಕರಿಗೆ ಹೆಚ್ಚು ಗೌರವ ತರಬೇಕು ಎಂದು ಐಎಂಎ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ.ಪಿ.ಟಿ.ವಿಜಯ್ ಕುಮಾರ್ ವೈದ್ಯರ ಮಕ್ಕಳಿಗೆ ಸಲಹೆ ನೀಡಿದರು.  ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯಲ್ಲಿರುವ ಕರ್ನಾಟಕ ಇ.ಎನ್.ಟಿ ಆಸ್ಪತ್ರೆಯಲ್ಲಿ  ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಯಿತು.ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದರೆ ಉತ್ತಮ ಫಲಿತಾಂಶ ತಾನಾಗಿಯೇ ಬರುತ್ತದೆ. ವೈದ್ಯರ ಮಕ್ಕಳು ಆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಶಾಖೆಗೆ (ಐಎಂಎ) ಜಮೀನಿನ ಅಗತ್ಯತೆ ಇದೆ. ಈ ಹಿಂದೆ ಇಂಗಳದಾಳ್ ಬಳಿ ಐದು ಎಕೆರೆ ಜಮೀನು ನಿಗಧಿಯಾಗಿತ್ತು. ಆ ಜಮೀನು ಸಂಘಕ್ಕೆ ಇದುವರೆಗೂ ಹಸ್ತಾಂತರವಾಗಿಲ್ಲ. ಐಎಂಎ ಕಾರ್ಯಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಜಮೀನು ಹಸ್ತಾಂತರ ಕಾರ್ಯವಾಗಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದವರಿಗೆ ಮತ್ತು 60 ವರ್ಷ ತುಂಬಿದ ಡಾ.ಆರ್.ಕೃಷ್ಣಮೂರ್ತಿ ಹಾಗೂ ಆರ್.ಟಿ.ಚಂದ್ರಶೇಖರ್ ಹಾಗೂ ಅಂತರಾಜ್ಯ ಮತ್ತು ಹೊರ ದೇಶಗಳಲ್ಲಿ ಹೆಸರು ಮಾಡಿರುವ ಇ.ಎನ್.ಟಿ. ತಜ್ಞ ಡಾ.ಎನ್.ಬಿ.ಪ್ರಹ್ಲಾದ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಕುಮಾರ್ ಬಿ ಲಕ್ಕೋಳ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಭಾರತೀಯ ಸಂಘ ಉಪಾಧ್ಯಕ್ಷ ಡಾ.ಸಿ. ನಾರಾಯಣ ಮೂರ್ತಿ, ಡಾ.ಈ.ಶಿವಣಪ್ಪ, ಡಾ. ಲಕ್ಷ್ಮಣ ಇದ್ದರು. ಮಕ್ಕಳ ತಜ್ಞರಾದ ಡಾ.ಎಸ್.ಎಚ್. ದೇವರಾಜ ಸ್ವಾಗತಿಸಿದರು. ಭಾರತೀಯ ವೈದ್ಯಕೀಯ ಸಂಘ ಚಿತ್ರದುರ್ಗ ಶಾಖೆಯ ಕಾರ್ಯದರ್ಶಿ ಡಾ. ಕೆ.ಎಂ. ಬಸವರಾಜ್ ವಂದನಾರ್ಪಣೆ ನೇರವೇರಿಸಿದರು.