
ಕೋಲಾರ,ಜು.೨೧-ವಿದ್ಯಾರ್ಥಿಗಳು ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದರೆ ಇಂತಹ ಕಾರ್ಯಾಗಾರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸಗೌಡ ಅಭಿಪ್ರಾಯ ಪಟ್ಟರು.
ನಗರದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ಕಾಲೇಜಿನಿಂದ ಉದ್ಯೋಗ ಮಾಹಿತಿಗೆ ಸಂಬಂಧಿಸಿದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಜೀವನಕ್ಕೆ ಮತ್ತು ಭವಿಷ್ಯಕ್ಕೆ ಉದ್ಯೋಗ ಮುಖ್ಯ, ವಿದ್ಯಾರ್ಥಿಗಳು ಪದವಿ ಮುಗಿಸಿದರು ಉದ್ಯೋಗ ಪಡೆಯಲು ಬೇಕಾದ ಅರಿವು ಮತ್ತು ಚಿಂತನೆ ಕಡಿಮೆ ಇರುತ್ತದೆ, ಜ್ಞಾನದ ಜತೆಗೆ ಆತ್ಮವಿಶ್ವಾಸದ ಅವಶ್ಯಕತೆ ಬೇಕು ಇಲ್ಲವಾದಲ್ಲಿ ವಿಷಯದ ಜ್ಞಾನವಿದ್ದರೂ ಉದ್ಯೋಗದಿಂದ ವಂಚಿತಗೊಳ್ಳಬೇಕಾಗುತ್ತದೆ ಎಂದರು.
ಇವತ್ತು ಉದ್ಯೋಗಕ್ಕೆ ಹೋಗುವ ಮುಂಚೆ ಹೇಗೆ ತಯಾರಿಯಾಗಬೇಕು, ನಮ್ಮಲ್ಲಿನ ಕೌಶಲ್ಯ ಹೇಗೆ ನಿರೂಪಿಸಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶವಾಗಿದೆ, ಸಾಮಾಜಿಕ ಕಾಳಜಿಯ ಜೊತೆಗೆ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗಾಗಿ ಮಾರ್ಗದರ್ಶನ ನೀಡುವಲ್ಲಿ ಈ ಕಾರ್ಯಾಗಾರದ ಮಾಹಿತಿ ಉಪಯುಕ್ತವಾಗಿದೆ, ಈ ಕುರಿತು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಗಾರ ಆಯೋಜಿಸುವುದರ ಮೂಲಕ ಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಲು ಇದು ಒಂದು ವೇದಿಕೆಯಾಗಲಿದೆ ಎಂದರು.
ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ತರಬೇತುದಾರ ಜೋಸ್ ಡ್ಯಾನಿಲ್, ಕಾಲೇಜಿನ ಐಕ್ಯೂಎಸ್ ಮುಖ್ಯಸ್ಥ ಡಾ.ಎಸ್.ಮುರಳೀಧರ್, ಡಾ.ಶಂಕರಪ್ಪ, ಡಾ.ಸಂಗೀತಾ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಸತೀಶ್, ಖಜಾಂಚಿ ಚನ್ನನರಸಿಂಹಪ್ಪ, ಅರ್ಥಶಾಸ್ತ್ರ ವಿಭಾಗದ ಕೋಮಲ, ಅಧ್ಯಾಪಕರಾದ ಉಮಾ, ಲಕ್ಷ್ಮೀ, ನಾಗನಾಳ ಮುನಿಯಪ್ಪ, ಅನಂತಮೂರ್ತಿ, ನಂದೀಶ್, ಹೇಮಾವತಿ, ಕವಿತ, ಸಂಪತ್ ಇದ್ದರು.