
ಬೆಂಗಳೂರು,ಆ.೭- ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅವರಿಗೆ ಹೃದಯಾಘಾತ ಸಂಭವಿಸಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎನ್ನುವ ಸಂಗತಿ ಆಘಾತಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ
ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ಧಾರೆ.
ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.
ತೀವ್ರ ಆಘಾತ
ವಿಜಯ್ ರಾಘವೇಂದ್ರ ಅವರ ತಂದೆ ನಿರ್ಮಾಪಕ ಚಿನ್ನೇಗೌಡರ ಜೊತೆ ಮಾತನಾಡಿದ್ದು ಅವರ ಆಘಾತದಲ್ಲಿದ್ದಾರೆ. ಪುನೀತ್ ರಾಜ್ ಕುಮಾರ್ ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ, ಆಗಲೇ ಈ ಆಘಾತ ನೋವಿನ ಸಂಗತಿ ಎಂದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಆಘಾತ ವ್ಯಕ್ತಪಡಿಸಿದ್ದಾರೆ.
ಸ್ಪಂದನ ಅವರನ್ನು ಬಾಲ್ಯದಿಂದ ನೋಡಿದ್ದೇನೆ. ಒಳ್ಳೆಯ ಹುಡುಗಿ, ಅವರ ಅಕಾಲಿಕ ಸಾವು ನೋವು ತಂದಿದೆ. ಚಿಕ್ಕ ವಯಸ್ಸಿನಲ್ಲಿ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್ ಮತ್ತು ಚಿರಂಜೀವಿ ಸರ್ಜಾ ಸೇರಿದಂತೆ ಅನೇಕರು ಚಿಕ್ಕ ವಯಸ್ಸಿನಲ್ಲಿ ಸಾವನ್ನಪ್ಪುತ್ತಿರುವ ನೋವು ಮತ್ತು ಭಯದ ವಾತಾವರಣ ಮೂಡಿಸಿದೆ ಎಂದು ಹೇಳಿದ್ದಾರೆ.
ಅನೋನ್ಯವಾಗಿದ್ದರು
ಮಿಂಚಿನ ಓಟ ಚಿತ್ರ ನಿರ್ಮಾಣ ಮಾಡಿದ್ದೆ. ಆ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಶ್ರೀ ಮುರಳಿ ಜೊತೆಯಾಗಿ ನಟಿಸಿದ್ದರು. ಚಿತ್ರೀಕರಣ ಸಮಯದಲ್ಲಿ ಆಗಷ್ಟೇ ಮದುವೆಯಾಗಿತ್ತು. ಚಿತ್ರೀಕರಣಕ್ಕೆ ಸ್ಪಂದನ ಬಂದಿದ್ದರು. ಒಂದು ರೀತಿ ಹನಿಮೂನ್‌ಗೆ ಜೋಡಿ ಬಂದಂತೆ ಇತ್ತು ಎಂದು ಹಿರಿಯ ನಿರ್ಮಾಪಕ ಸಾ ರಾ ಗೋವಿಂದು ಚಿತ್ರೀಕರಣ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.ರಾಜ್‌ಕುಮಾರ್ ಕುಟುಂಬಕ್ಕೆ ಮೇಲಿಂದ ಮೇಲೆ ಆಘಾತಗಳು ಸಂಭವಿಸುತ್ತಿರುವುದು ನೋವಿನ ಸಂಗತಿ, ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.