ಸ್ನೇಹ ಗುರುತಿಸುವದೇ ಒಂದು ದೊಡ್ಡ ಪ್ರೊತ್ಸಾಹ :ಶಿವಾನಂದ ಕೊಪ್ಪದ

ಕಲಬುರಗಿ:ಆ.29: ಸ್ನೇಹ ಎಲ್ಲದಕ್ಕಿಂತ ದೊಡ್ಡದು ಅದನ್ನು ಗುರುತಿಸಿ ಪ್ರೋತ್ಸಾಹದ ಜೊತೆಗೆ ಸತ್ಕರಿಸುವುದು ಇನ್ನೂ ದೊಡ್ಡದು ಎಂದು ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಕೊಪ್ಪದ ಹೇಳಿದರು.
ಅವರು ನಗರದ ಬೊಂಬು ಬಜಾರದಲ್ಲಿರುವ ಶೇಖರ್ ಫೋಟೋ ಸ್ಟುಡಿಯೋ ಆವರಣದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಚಿತ್ರ ಕಲಾವಿದರಾದ ಡಾ. ಸುಬ್ಬಯ್ಯ ನೀಲಾ, ಮಹಮ್ಮದ್ ಅಯಾಜುದ್ದೀನ್ ಪಟೇಲ್, ಡಾ. ರೆಹಮಾನ್ ಪಟೇಲ್ ಮತ್ತು ರಾಘವೇಂದ್ರ ಭುರ್ಲಿ ಅವರನ್ನು ಕಲಾವಿದರ ಗೆಳೆಯರ ಬಳಗ ಹಾಗೂ ಆದಿತ್ಯ ಮೆಲೋಡೀಸ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ನೇಹ ಸಂಪೂರ್ಣವಿದ್ದರೆ ಇಂಥಹ ಕಾರ್ಯಕ್ರಮ ಮಾಡಲು ಸಾಧ್ಯ ಅದರಲ್ಲೂ ಈ ಸ್ನೇಹ ಮೂರು ದಶಕಗಳಿಂದ ಹೀಗೆ ಯಾವ ಕಲ್ಮಷವಿಲ್ಲದೆ ಸಾಗಿದೆ ಎನ್ನುವುದಕ್ಕೆ ಈ ಸಮಾರಂಭ ಸಾಕ್ಷಿ ಆಗಿದೆ. ನಮಗೆ ಕಲಿಸಿದ ಗುರುಗಳೊಂದಿಗೆ ಸತ್ಕರಿಸಿಕೊಳ್ಳುವುದು ದೊಡ್ಡ ಸೌಭಾಗ್ಯ ಅದು ಇಲ್ಲಿ ನೆರವೇರುತ್ತಿದೆ ಎಂದು ಹೇಳಿದರು.
ಸಮಾರಂಭದ ಆರಂಭದಲ್ಲಿ ಗೋಪಾಲರಾವ ಕುಲಕರ್ಣಿ, ಅಶೋಕ ಶೆಟಕಾರ ಹಾಗೂ ಕಿರಣ ಪಾಟೀಲ ಸುಮದುರ ಗೀತೆಗಳನ್ನು ಹಾಡಿದರು.
ಸನ್ಮಾನ ಸ್ವೀಕರಿಸಿ ನೀಲಾ, ಅಯಾಜುದ್ದಿನ, ರೆಹಮಾನ್ ಪಟೇಲ್ ಹಾಗೂ ಭುರ್ಲಿ ಅವರು ಸ್ನೇಹ ಅಪರೂಪದ್ದು ಅದು ಇಂದಿಗೂ ಜೀವಂತ ಎನ್ನುವುದಕ್ಕೆ ಇದು ಸಾಕ್ಷಿ ಆಗಿದೆ ಇದು ನಿರಂತರ ನಡೆಯಲಿ ಎಂದು ಮೂವತ್ತು ದಶಕದ ಗೆಳೆತನವನ್ನು ನೆನೆಸಿಕೊಂಡು ಮಾತನಾಡಿ ನಮಗೆ ದೊರೆತ ಎಲ್ಲ ಸನ್ಮಾನಕ್ಕಿಂತ ಇದು ದೊಡ್ಡದು ಎಂದು ಆಯೋಜಕರಾದ ಶೇಖರ್ ಯೋಗೇಶ ಹಾಗೂ ಮಲ್ಲು ಅವರುಗಳ ಪರಿಶ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಡಾ. ಸುಬ್ಬಯ್ಯ ನೀಲಾ, ಮಹಮ್ಮದ್ ಅಯಾಜುದ್ದೀನ್ ಪಟೇಲ್, ಡಾ. ರೆಹಮಾನ್ ಪಟೇಲ್ ಮತ್ತು ರಾಘವೇಂದ್ರ ಭುರ್ಲಿ ಅವರನ್ನು ಸನ್ಮಾನಿಸಿದರು.
ಲಲಿತಕಲಾ ಉಪನ್ಯಾಸಕ ಡಾ.ಅಶೋಕ್ ಶೆಟಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಪಾಲರಾವ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಸೂರ್ಯಕಾಂತ ನಂದೂರ ವಂದಿಸಿದರು. ಶರಣು ಪಟ್ಟಣಶೆಟ್ಟಿ, ಎಂ ಸಂಜೀವ, ಡಾ ಸೂರ್ಯಕಾಂತ ಪಾಟೀಲ್, ಸಿ,ಎಸ್. ಮಾಲಿಪಾಟೀಲ್, ಬಾಬುರಾವ ಹೆಚ್, ಸಂಗಯ್ಯಾ ಹಳ್ಳದಮಠ, ವಿಟಿಎನ್. ಆನಂದ ಆಲಮೇಲ, ನಾರಾಯಣ ಎಂ. ಜೋಶಿ, ಡಾ ಶಾಹೀದ ಪಾಶಾ ಮುಮತಾದವರು ಇದ್ದರು.