ಸ್ನೇಹಿತರಿಂದಲೇ ಆರೋಪಿ ಹತ್ಯೆ

ಬೆಂಗಳೂರು,ಮೇ೨೬- ಕ್ಷುಲ್ಲಕ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆರೋಪಿಯೊಬ್ಬ ತನ್ನ ಸ್ನೇಹಿತರಿಂದಲೇ ಬರ್ಬರ ಕೊಲೆಯಾಗಿರುವ ದುರ್ಘಟನೆ ಮಹದೇವಪುರದಲ್ಲಿ ತಡರಾತ್ರಿ ನಡೆದಿದೆ.
ರೇಣುಕುಮಾರ್ (೨೪)ಕೊಲೆಯಾದ ದುರ್ದೈವಿಯಾಗಿದ್ದು,ಕೃತ್ಯ ನಡೆಸಿದ ಪ್ರಶಾಂತ್, ಶ್ರೀಕಾಂತ್, ವಸಂತ ಕುಮಾರ್ ನನ್ನು ಮಹದೇವಪುರ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ರೇಣುಕುಮಾರ್ ಕೊಲೆ ಯತ್ನ, ರಾಬರಿ, ಹಲ್ಲೆ ಸೇರಿದಂತೆ ಏಳು ಅಪರಾಧ ದಾಖಲಾಗಿದ್ದವು. ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ರೇಣುಕುಮಾರ್, ನೀವು ನನ್ನ ಜತೆಗೆ ಇರಬೇಕೆಂದು ಶ್ರೀಕಾಂತ್ ಮತ್ತು ಪ್ರಶಾಂತ್‌ಗೆ ಬೆದರಿಕೆಯನ್ನು ಹಾಕಿದ್ದಾನೆ. ಒಂಟಿಯಾಗಿ ಏನಾದರೂ ಕೆಲಸ ಮಾಡಿದರೆ ನಿಮ್ಮನ್ನು ನಾನು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ ಎನ್ನಲಾಗಿದೆ.
ಜೈಲಿಗೆ ಹೋಗಿ ಬಂದಿದ್ದೇನೆ ನಾನೇ ನಿಮಗೆಲ್ಲ ಬಾಸ್’ ಎಂದು ಇವರಿಬ್ಬರಿಗೂ ಬೆದರಿಕೆ ಹಾಕುತ್ತಿದ್ದು ನಿನ್ನೆ ಕೂಡ ಶ್ರೀಕಾಂತ್ ಮತ್ತು ಪ್ರಶಾಂತ್‌ಗೆ ರೇಣುಕುಮಾರ್ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇವರಿಬ್ಬರು, ರೇಣುಕುಮಾರ್ ಬದುಕಿದ್ದರೆ ನಮ್ಮನ್ನು ಹೊಡೆದು ಮುಗಿಸಿಬಿಡುತ್ತಾನೆ. ಹೀಗಾಗಿ ನಾವೇ ಅವನನ್ನು ಹೊಡೆದು ಮುಗಿಸಲು ಸಂಚು ಮಾಡಿದ್ದಾರೆ.
ಅದರಂತೆ ಶ್ರೀಕಾಂತ್, ಪ್ರಶಾಂತ್ ಬಂಗಾರಪೇಟೆ ಮೂಲದ ಗೆಳೆಯ ವಸಂತ್‌ನನ್ನು ಜತೆಗೆ ಸೇರಿಸಿಕೊಂಡು ನಿನ್ನೆ ರೇಣುಕುಮಾರ್‌ನನ್ನು ಕರೆಸಿಕೊಂಡಿದ್ದು ಮೊದಲೇ ಯೋಜಿಸಿದ್ದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.