ಸ್ನೇಹಿತನ ಹತ್ಯೆ ಐವರ ಬಂಧನ

ಬೆಂಗಳೂರು,ಜ.೨೮-ಮನೆಯ ದಿನಸಿ ಸಾಮಾನುಗಳನ್ನು ಖರೀದಿಸಲು ದೊಡ್ಡಮ್ಮ ಕೊಟ್ಟ ಹಣದಲ್ಲಿ ಮದ್ಯದ ಪಾರ್ಟಿ ಕೊಡಿಸಿದ ಸ್ನೇಹಿತನನ್ನೇ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದ ಐವರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಡಿದ ಅಮಲಿನಲ್ಲಿ ಕಳೆದ ಜ. ೨೪ರಂದು ಬೆಳಗಿನ ಜಾವ ೨.೩೦ರ ಸುಮಾರಿಗೆ ದರ್ಶನ್ ತಲೆ ಮೇಲೆ ಆತನ ಸ್ನೇಹಿತರೇ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸುಬ್ರಹ್ಮಣ್ಯಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪೂರವಾಡ ತಿಳಿಸಿದ್ದಾರೆ. ಮನೆಯ ರೇಷನ್ ಸೇರಿ ಹಲವು ದಿನಬಳಕೆ ವಸ್ತುಗಳನ್ನು ಖರೀದಿಸು ಎಂದು ದರ್ಶನ್‌ಗೆ ಆತನ ದೊಡ್ಡಮ್ಮ ೩ ಸಾವಿರ ರೂಗಳನ್ನು ಕೊಟ್ಟಿದ್ದರು.ಅದೇ ದುಡ್ಡಲ್ಲಿ ಗೆಳೆಯರ ಜತೆ ಪಾರ್ಟಿ ಮಾಡಲು ದರ್ಶನ್ ಹೋಗಿದ್ದ. ಬಾರ್‌ನಲ್ಲಿ ಗೆಳೆಯರ ಜತೆ ದರ್ಶನ್ ಪಾರ್ಟಿ ಮಾಡಿದ್ದು, ಮದ್ಯದ ಅಮಲಿನಲ್ಲಿ ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಧ್ಯೆಯೇ ಗಲಾಟೆ ನಡೆದಿದೆ. ಸ್ನೇಹಿತರ ಸಹವಾಸವೇ ಬೇಡ ಎಂದು ರಮೇಶ್ ಎಂಬಾತನ ಮನೆಯಲ್ಲಿ ದರ್ಶನ್, ನಿತಿನ್ ಹಾಗೂ ರಮೇಶ್ ಪಾರ್ಟಿ ಮಾಡುತ್ತಿದ್ದರು.
ಬಾರ್‌ನಲ್ಲಿ ನಡೆದ ಗಲಾಟೆಯನ್ನು ಮರೆತು ಮನೆಗೆ ಹೋಗದ ಚಂದ್ರಶೇಖರ್, ಪ್ರೀತಂ, ಯಶವಂತ್, ಪ್ರಶಾಂತ್, ಲಂಕೇಶ್ ಹಾಗೂ ಮತ್ತೊಬ್ಬ ದರ್ಶನ್ ಎಂಬುವರು ರಮೇಶ್ ಮನೆಗೆ ಬಂದಿದ್ದಾರೆ. ಅಲ್ಲಿ ಪ್ರೀತಂ ಹಾಗೂ ನಿತಿನ್ ಮಧ್ಯೆ ಭಾರಿ ಗಲಾಟೆ ನಡೆದಿದೆ. ಇದೇ ವೇಳೆ, ಆಗಿದ್ದು ಆಯಿತು ಹೋಗಲಿ ಬಿಡಿ ಎಂದು ದರ್ಶನ್ ಜಗಳ ಬಿಡಿಸಲು ಮುಂದಾಗಿದ್ದಾನೆ. “ನಿನ್ನಿಂದಲೇ ಎಲ್ಲ ಆಗಿದ್ದು” ಎಂದು ಪ್ರೀತಂ ಹಾಗೂ ಆತನ ಗೆಳೆಯರು ದರ್ಶನ್ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು ಪ್ರೀತಂ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.