
ಅಥಣಿ : ಅ.2:ಉತ್ತರ ಕರ್ನಾಟಕದ ಅನೇಕ ಜಿಲ್ಲೆ ಮತ್ತು ಗಡಿಭಾಗದ ಅನೇಕ ಗ್ರಾಮಗಳ ಹಿಂದುಳಿದ ಭಾಗದಲ್ಲಿ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ನ ಸದಸ್ಯರು ಸಮಾನ ಮನಸ್ಕರರಾಗಿ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ರೂಪಿಸುವುದರ ಜೊತೆಗೆ ಅನೇಕ ಸಮಾಜಮುಖಿ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈ ಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.
ಅವರು ಅಥಣಿ ತಾಲೂಕಿನ ಮಲಾಬಾದ ಗ್ರಾಮದ ವಿಮೋಚನ ಸಂಸ್ಥೆಯ ವಸತಿ ಶಾಲೆಯಲ್ಲಿ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್, ಬೆಂಗಳೂರು ಇವರ ಸಹಾಯಧನದಿಂದ ನಿರ್ಮಾಣಗೊಂಡ ಬಸವ ಸ್ಮೃತಿ ಸಭಾ ಭವನ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ನಾವು ಬೆಳೆಯೋಣ ಇನ್ನೊಬ್ಬರನ್ನು ಬೆಳೆಸೋಣ ಎಂಬ ಸಂಕಲ್ಪದಿಂದ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಈ ಭಾಗದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ದೇವದಾಸಿ ಮತ್ತು ಅಸ್ಪೃಶ್ಯತೆಗಳಂತಹ ಸಾಮಾಜಿಕ ಕಳಂಕಗಳಿಂದ ದೂರವಾದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದೇವದಾಸಿಯರ ಅರ್ಥಪೂರ್ಣ ಪುನರ್ವಸತಿ ಮತ್ತು ಅಂತವರ ಮಕ್ಕಳಿಗೆ ಶಿಕ್ಷಣ-ಸ್ವಯಂ ಉದ್ಯೊ?ಗ ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಮೂರು ದಶಕಗಳಿಂದ ವಿಮೋಚನಾ ಸಂಸ್ಥೆ ಶ್ರಮಿಸುತ್ತಿದೆ. ಇಂತಹ ಸಂಸ್ಥೆಯಲ್ಲಿ ಸ್ನೇಹಲೋಕ ಟ್ರಸ್ಟ್ ತಮ್ಮ ಸಹಾಯಧನದ ಮೂಲಕ ಸುಂದರವಾದ ಸಭಾಭವನವನ್ನು ನಿರ್ಮಿಸಿದ್ದಾರೆ. ಅವರ ಸಾಮಾಜಿಕ ಕಳಕಳಿಯ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿ ಸನ್ಮಾನಿಸಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಿ ಎಲ್ ಪಾಟೀಲ ಮಾತನಾಡಿ ಸಮಾಜದಲ್ಲಿನ ಅನಿಷ್ಟ ಪಿಡುಗು ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಮತ್ತು ದೇವದಾಸಿಯರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಕೊಡಿಸುವಲ್ಲಿ ಕಳೆದ 30 ವರ್ಷಗಳಿಂದ ವಿಮೋಚನಾ ಸಂಸ್ಥೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾದರೆ ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿ ಈ ಸಂಸ್ಥೆಯನ್ನು ಕಟ್ಟಿದ್ದೇವೆ. ಇಂದು ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿರುವುದು ನಮಗೆ ಸಂತಸ ತಂದಿದೆ. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸ್ನೇಹಲೋಕ ಟ್ರಸ್ಟ್ ಅವರ ಕಾರ್ಯ ಮಹತ್ತರವಾದದ್ದು. ನಾನು ಕೂಡ ಈ ಟ್ರಸ್ಟ್ ನ ಸದಸ್ಯನಾಗಿ ಇರುವುದು ನನಗೆ ಹೆಮ್ಮೆ. ನಮ್ಮ ಸಂಸ್ಥೆಯ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಂದರವಾದ ಸಭಾಭವನ ನಿರ್ಮಿಸಿದ್ದಾರೆ. ಅವರ ಈ ಸಮಾಜಮುಖಿ ಸೇವೆಗೆ ಸಂಸ್ಥೆಯ ವತಿಯಿಂದ ಅಭಿನಂದಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ ರಾಜಗೋಳಿ, ಉಪಾಧ್ಯಕ್ಷ ಅರುಣ ಯಾದವಾಡ ಮಾತನಾಡಿ ಉತ್ತರ ಕರ್ನಾಟಕದ ಸವಾರ್ಂಗಿನ ಅಭಿವೃದ್ಧಿಯಲ್ಲಿ ಸ್ನೇಹಲೋಕ ಟ್ರಸ್ಟ್ ಮಾಡುತ್ತಿರುವ ಕಾರ್ಯಗಳ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನೇಹಲೋಕ ಟ್ರಸ್ಟನ ಸದಸ್ಯರಾದ ದೀಪಕ ಆಲೂರ, ಮಲ್ಲಿಕಾರ್ಜುನ ಹೊಸಮನಿ, ಸಮಾಜ ಸೇವಕ ಎಲ್ ವಿ ಕುಲಕರ್ಣಿ, ಭಾರತಿ ಬಿಜಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಮೋಚನ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ ಎಲ್ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕು. ಸೀಮಾ ಟಕ್ಕಳಕಿ ಮುತ್ತು ಅಕ್ಷತಾ ಮಾಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಕಾಂಬಳೆ ವಂದಿಸಿದರು.