ಸ್ನೇಹರ್ಷಿ” ಮೊದಲ ಹಾಡು ಬಿಡುಗಡೆ

“ಸ್ನೇಹರ್ಷಿ” ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಗಾಯಕ ನವೀನ್ ಸಜ್ಜು ಹಾಡಿರುವ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ‌ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.

ಚಿತ್ರದ ನಾಯಕ ಕಿರಣ್ ನಾರಾಯಣ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ನೃತ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಹಾಡು ಹೊರ ಬಂದಿದೆ.

ನಾಯಕನಾಗಿ ಅಭಿನಯಿಸಿರುವ ರಂಗಭೂಮಿ ಹಿನ್ನೆಲೆಯ ಕಿರಣ್ ನಾರಾಯಣ್ ನಿರ್ದೇಶನವನ್ನು ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಕಿರಣ್ ನಾರಾಯಣ್, ಚಿತ್ರಕ್ಕೆ‌ ನಮ್ಮ ನಾಗತಿಹಳ್ಳಿ ಪ್ರತಿಭ ಕಥೆ ಬರೆದಿದ್ದಾರೆ. ಅಮ್ಮ ಹೇಳುವ ಕಥೆ ಬೇರೆಯವರಿಗಿಂತ ನನಗೆ ಬೇಗ ಅರ್ಥವಾಗುತ್ತದೆ. ಹಾಗಾಗಿ ಚಿತ್ರ ನಿರ್ದೇಶಿಸಲು ಮುಂದಾದೆ.‌ ಸಾಮಾಜಿಕ ಕಾಳಜಿಯ ಕಥಾಹಂದರವಿದ್ದು, ಚಿತ್ರಕಥೆ ಬರೆದಿದ್ದೇನೆ ಎಂದರು. ತಾಂತ್ರಿಕವರ್ಗ ಹಾಗೂ ಕಲಾವಿದರ ಪರಿಚಯಮಾಡಿಸಿದರು.

ನಾಗತಿಹಳ್ಳಿ ಪ್ರತಿಭ ಹಾಗೂ ಕಿರಣ್ ನಾರಾಯಣ್ ಈ ಚಿತ್ರದ ನಿರ್ಮಾಪಕರು. ಹಿರಿಯ ಪೋಷಕ‌ ಕಲಾವಿದೆ ನಟಿ ಸುಧಾ ಬೆಳವಾಡಿ ಕಿರಣ್ ನಾರಾಯಣ್ ಸಾಧಾರಣ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ತರುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶನದ ಜೊತೆಗೆ ನಾಯಕನಾಗೂ ಸಿನಿರಂಗ ಪ್ರವೇಶಿಸುತ್ತಿರುವ ಈ ಹುಡುಗನಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ನಾಗತಿಹಳ್ಳಿ ಜಯಪ್ರಕಾಶ್, ಪಾತ್ರದ ಬಗ್ಗೆ ಮಾತನಾಡುತ್ತಾ ಮಾಧ್ಯಮವನ್ನು ಪ್ರತಿನಿಧಿಸುವ ಪಾತ್ರ ನನ್ನದು. ಮೂಲತಃ ನಾನೊಬ್ಬ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ. ನಾನು ಪತ್ರಿಕೋದ್ಯಮ ಓದಿದ್ದೇನೆ.‌ ಕಿರಣ್ ಪಾತ್ರ ಮಾಡಿ ಎಂದು ಒತ್ತಾಯ ಮಾಡಿದಾಗ ಒಪ್ಪಿಕೊಂಡು ಮಾಡಿದ್ದೇನೆ.

ಮಾಧ್ಯಮ ಕೂಡ ಒಂದು ಸಾಮಾಜಿಕ ಕಳಕಳಿಗೆ ಹೇಗೆ ಸ್ಪಂದಿಸಬಲ್ಲದು ಎಂಬ ಅಂಶ ಈ ಚಿತ್ರದಲ್ಲಿ ನೋಡಬಹುದು ಎಂದರು. ಬಹುಶಃ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.

ಈಗಷ್ಟೇ ಚಿತ್ರದ ಪ್ರಚಾರ ಕಾರ್ಯ ಆರಂಭ ಮಾಡಿದ್ದು, ಇದರ ಮೊದಲಹೆಜ್ಜೆಯಾಗಿ‌ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ.‌ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಕಿರಣ್ ನಾರಾಯಣ್ ಹೇಳಿದರು.

ಆಕಾಶ್ ಅಯ್ಯಪ್ಪ “ಸ್ನೇಹರ್ಷಿ” ಗೆ ಸಂಗೀತ ನೀಡಿದ್ದು, ರವಿಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿದೆ. ರಾಜು ಎನ್.ಕೆ ಗೌಡ ಗೀತರಚನೆ ಮಾಡಿದ್ದಾರೆ.

ಕಿರಣ್ ನಾರಾಯಣ್ ನಾಯಕನಾಗಿ ‌ನಟಿಸಿರುವ ಈ‌ ಚಿತ್ರದ ತಾರಾಬಳಗದಲ್ಲಿ ಸುಧಾ‌ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಮುಂತಾದವರಿದ್ದಾರೆ.