ಸ್ನಾನ ಮಾಡಲು ನದಿಗೆ ಇಳಿದ ತಂದೆ-ಮಗ ಜಲಸಮಾಧಿ

ಕಲಬುರಗಿ:ನ.15:ಸಂಬಂಧಿಕರ ಮನೆಗೆ ಬಂದಿದ್ದ ತಂದೆ-ಮಗ ಸ್ನಾನ ಮಾಡಲು ಸೇಡಂ ತಾಲೂಕಿನ ಮಳಖೇಡ ಸಮೀಪದ ಸಂಗಾವಿ ಎಂ ಗ್ರಾಮದ ಬಳಿಯ ಕಾಗಿಣಾ ನದಿಗೆ ರವಿವಾರ ಮಧ್ಯಾನ ಇಳಿದಾಗ ನದಿಯ ಸುಳಿಗೆ ಸಿಲುಕಿ ಇಬ್ಬರು ಜಲಸಮಾಧಿಯಾದ ಘಟನೆ ನಡೆದಿದೆ.
ಮೃತರನ್ನು ಮಿರ್ಜಾ ಖಾಯಂ ಅಲಿ ಬೇಗ್(51) ಹಾಗೂ ಮಿರ್ಜಾ ಮೆಹದಿ ಅಲಿ ಬೇಗ್(19) ಎಂಬುವವರೇ ನದಿಯಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.ಮೃತರು ಹೈದ್ರಾಬಾದನ ನಿವಾಸಿಗಳೆಂದು ತಿಳಿದುಬಂದಿದೆ.ತಂದೆಯ ಶವ ಪತ್ತೆಯಾಗಿದ್ದು,ಮಗನ ಶವಕ್ಕಾಗಿ ಹುಡುಕಾಟ ನಡೆದಿದೆ.
ಸುದ್ದಿ ತಿಳಿದು ಮಳಖೇಡ ಪಿಎಸ್‍ಐ ಶಿವಶಂಕರ ಸಾಹು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕದಳದವರು ಶವಗಳ ಪತ್ತೆಯಲ್ಲಿ ತೊಡಗಿದ್ದಾರೆಂದು ತಿಳಿದುಬಂದಿದೆ.ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿದೆ.