ಸ್ನಾತಕೋತ್ತರ ತರಗತಿಗಳ ಕೇಂದ್ರಕ್ಕೆ ಮನವಿ

ಶಿರಹಟ್ಟಿ,ನ25: ಶಿರಹಟ್ಟಿ ಪಟ್ಟಣದಲ್ಲಿನ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿಗಳ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯೆ ತಾಲೂಕಾ ಅದ್ಯಕ್ಷ ಬಸವರಾಜ ಒಡವಿ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ಒಡವಿ ಶಿರಹಟ್ಟಿ ಪಟ್ಟಣದ ಶ್ರೀ ಎಸ್.ಜೆ.ಎಫ್ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಸ್ನಾತಕೋತ್ತರ ತರಗತಿಗಳ ಆರಂಭಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ವರ್ಷಾನುಗಟ್ಟಲೆ ಸಮಯ ಕಳೆದರೂ ತರಗತಿಗಳು ಆರಂಭವಾಗಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಜೊತೆಗೆ ತರಗತಿ ಆರಂಭಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಬಡ ವಿದ್ಯಾರ್ಥಿಗಳು ಪದವಿ ನಂತರ ಶೈಕ್ಷಣಿಕ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸುತ್ತಿದ್ದಾರೆ. ಅತೀ ಶೀಘ್ರದಲ್ಲಿ ತರಗತಿ ಆರಂಭವಾಗದೇ ಹೋದರೆ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಾಲೇಜುಗಳ ಅಭಿವೃದ್ದಿ ಅಧಿಕಾರಿ ಟಿ.ಸಿ.ತರಣಳ ಮನವಿ ಸ್ವೀಕರಿಸಿ ಶಿರಹಟ್ಟಿಯಲ್ಲಿ ಸ್ನಾತಕೋತ್ತರ ಪದವಿ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವೇಂದ್ರ ಶಿಂದೆ, ಪ್ರಕಾಶ ಕಲ್ಯಾಣಿ, ರಾಕೇಶ ಬೂದಿಹಾಳ, ಮಾಂತೇಶ ಸುರಣಗಿ, ರಾಜು ಹರಿಜನ, ನಾಗೇಂದ್ರ ಬಿರಬ್ಬಿ, ರವಿ ಮಟ್ಟಿ, ಅರುಣ ವಡವಿ, ಶಿವಾನಂದ ಹಿರೇಮಠ, ವಿದ್ಯಾಧರ ಮರಬದ್, ಉಪಸ್ಥಿತರಿದ್ದರು.