ಸ್ಥಳೀಯ ಸಂಸ್ಥೆ ಚುನಾವಣೆಗಳತ್ತ ಚಿತ್ತ: ಎಚ್‌ಡಿಡಿ

ಬೆಂಗಳೂರು,ಜೂ.೬:ಬಿಜೆಪಿ ಜತೆ ಕೈಜೋಡಿಸದ ಯಾವುದೇ ಪಕ್ಷ ದೇಶದಲ್ಲಿಲ್ಲ. ಒಂದಲ್ಲ ಒಂದು ಕಾರಣಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಎಲ್ಲ ಪಕ್ಷಗಳು ಬಿಜೆಪಿ ಜತೆ ಕೈಜೋಡಿಸಿವೆ ಎಂದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು, ಸದ್ಯ ನಾವು ಲೋಕಸಭಾ ಚುನಾವಣೆಯ ಬಗ್ಗೆ ಚಿಂತಿಸುತ್ತಿಲ್ಲ. ಜಿಲ್ಲಾ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಗಮನ ಹರಿಸಿದ್ದೇವೆ ಎಂದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಬಿಬಿಎಂಪಿ ಚುನಾವಣೆಗಳಿವೆ. ಈ ಚುನಾವಣೆಗಳಲ್ಲಿ ಪಕ್ಷ ಪಡೆಯುವ ಜನ ಬೆಂಬಲ ಆಧರಿಸಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಲೋಕಸಭಾ ಚುನಾವಣೆಗೆ ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ಜೆಡಿಎಸ್‌ಗೆ ಇದೆ. ಲೋಕಸಭಾ ಚುನಾವಣೆಯ ಬಗ್ಗೆ ಈಗ ನಾವು ಚರ್ಚೆ ಮಾಡಲು ಹೋಗಲ್ಲ ಎಂದರು.
ವಿಧಾನಸಭಾ ಚುನಾವಣೆಯ ಸೋಲಿನಿಂದ ಕಾರ್ಯಕರ್ತರು ಹತಾಶರಾಗಬೇಕಿಲ್ಲ. ಎಲ್ಲ ಹಂತಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡಿ ಪಕ್ಷವನ್ನು ಮತ್ತೆ ಬಲವಾಗಿ ಕಟ್ಟುವುದು ತಮ್ಮ ಗುರಿ ಎಂದರು.ದೇಶದಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಡೆದಿರುವ ಪ್ರಯತ್ನದಲ್ಲಿ ಜೆಡಿಎಸ್ ಸಹ ಸೇರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಎಲ್ಲ ಪಕ್ಷಗಳು ಬಿಜೆಪಿ ಜತೆ ನೇರ ಅಥವಾ ಪರೋಕ್ಷವಾಗಿ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಅದರಲ್ಲಿ ಸೇರಿದ್ದಾರೆ. ದೇಶದಲ್ಲಿ ಬಿಜೆಪಿ ಜತೆ ಸೇರದ ಒಂದು ಪಕ್ಷವನ್ನು ತೋರಿಸಿ, ನಂತರ ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡೋಣ ಎಂದರು.