ಸ್ಥಳೀಯ ಸಂಸ್ಥೆಗಳ ಮೀಸಲಾತಿ‌ ರದ್ದು;ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಬಿಗ್ ಶಾಕ್

ಬೆಂಗಳೂರು, ನ.19- ರಾಜ್ಯ ವ್ಯಾಪ್ತಿಯ ಎಲ್ಲಾ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ದಿಢೀರ್ ರದ್ದು ಮಾಡಿದೆ.

ಹಾಸನ, ಅರಸಿಕೇರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಗುರುವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಈ ಮಹತ್ವದ ಆದೇಶ ಹೊರಡಿಸಿದೆ‌.

ಮೀಸಲು ನೀಡುವ ವೇಳೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ನಾಲ್ಕು ವಾರಗಳ ಒಳಗೆ ರೊಟೇಷನ್ ಪದ್ಧತಿ ಅನುಸಾರ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ಮಾಡಿದೆ.

ಪ್ರಕರಣದ ಹಿನ್ನೆಲೆ: ಮೀಸಲಾತಿ ಕಲ್ಪಿಸುವ ವೇಳೆ ರೊಟೇಷನ್ ಅನುಸರಿಸಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅ.15ರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಹಾಗೂ ಅ.19ರಂದು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತ್ತು.

ಅಷ್ಟೇ ಅಲ್ಲದೆ, ಮೀಸಲಾತಿ ಆವರ್ತನೆ ಪರಿಶೀಲಿಸಿ ಕರಡು ಸಲ್ಲಿಸಲು ಮೂವರು ವಕೀಲರನ್ನೊಳಗೊಂಡ ತ್ರಿಸದಸ್ಯ ಸಮಿತಿ ನೇಮಕ ಮಾಡಿತ್ತು. ಏಕಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅ.19ರಂದು ಮಾನ್ಯ ಮಾಡಿದ್ದ ವಿಭಾಗೀಯ ಪೀಠವೂ

ಏಕಸದಸ್ಯ ಪೀಠದ ತಡೆಯಾಜ್ಞೆ ತೆರವುಗೊಳಿಸಿ, ರಾಜ್ಯದ ಎಲ್ಲ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿದ್ದ ಹೈಕೋರ್ಟ್, ಚುನಾವಣಾ ಫಲಿತಾಂಶ ಅರ್ಜಿಗಳ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ತಿಳಿಸಿತ್ತು.

ಇದರಿಂದ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅ.22ರಂದು ಹಿಂಪಡೆದಿದ್ದ ಏಕಸದಸ್ಯಪೀಠ, ನ.10ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.