ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ಈಶ್ವರ ಖಂಡ್ರೆ ಒತ್ತಾಯ

ಬೀದರ, ಏ.20: ರಾಜ್ಯದಲ್ಲಿ ಕೋವಿಡ್ -19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧ, ಹಾಸಿಗೆ, ಆಕ್ಸಿಜನ್ ಸಹ ದೊರಕದ ಸ್ಥಿತಿ ನಿರ್ಮಾಣವಾಗಿದ್ದು, ಈ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮಾರ್ಚ್ 29ರಂದು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆದು, ಚುನಾವಣೆ ಮುಂದೂಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.ರಾಜಕೀಯ ಪಕ್ಷಗಳಿಗೆ ಚುನಾವಣೆ ಒಂದು ಹಬ್ಬವಿದ್ದಂತೆ. ಆದರೆ ಪ್ರಸಕ್ತ ಸಾಂಕ್ರಾಮಿಕದ ಸನ್ನಿವೇಶದಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಸೂಕ್ತ ಚಿಕಿತ್ಸೆಯೂ ಸಿಗದೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಯಾವುದೇ ಚುನಾವಣೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಯೋಗ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಬೀದರ್ ಜಿಲ್ಲೆಯ 5 ನಗರಸಭೆ, 2 ಪುರಸಭೆ ಹಾಗೂ 2 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣಾ ವೇಳಾಪಟ್ಟಿ ಹೊರಡಿಸಿದೆ. ಈ ಎಲ್ಲ ಕ್ಷೇತ್ರದಲ್ಲಿ ಏಪ್ರಿಲ್ 27ರಂದು ಮತದಾನ ನಡೆಯಬೇಕಾಗಿದ್ದು, ಚುನಾವಣೆ ಪ್ರಚಾರ ಮತ್ತು ಮತದಾನದ ವೇಳೆ ಸೋಂಕು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ಚಿಕಿತ್ಸೆಯೂ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವುದೇ ಸೂಕ್ತ ಎಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೆದರುವುದಿಲ್ಲ. ನಾವು ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಿಸಲು ಸಿದ್ಧ. ಹಾಗೆಂದು ರಾಜ್ಯದ ಮುಗ್ಧ ಜನರ ಜೀವದ ಜೊತೆ ಚಲ್ಲಾಟವಾಡಲು ಪಕ್ಷ ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.