ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧ

(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಮೇ೨೪:ಲೋಕಸಭಾ ಚುನಾವಣೆ ಮುಗಿದ ಕೂಡಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ, ಜಿಲ್ಲಾ ಪಮಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಕೂಡಲೇ ಈ ಚುನಾವಣೆಗಳನ್ನು ನಿಗದಿ ಮಾಡಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊದಲು ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ಆಗುತ್ತದೆ.ನಂತರ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸಿಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ನಿಗದಿ ಮಾಡಲಿದೆ ಎಂದರು.
ಬಿಬಿಎಂಪಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಕಾನೂನಿನಮೊರೆ ಹೋಗಲು ಪ್ರತಿಕ್ರಿಯಸಿರುವ ಅವರು, ನಾವು ಚುನಾವಣೆ ನಡೆಸಲು ತಯಾರಿದ್ದೇವೆ. ಲೋಕಸಭಾ ಚುನಾವಣೆ ಕಾರಣದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಗದಿಮಾಡಿಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ಜಿಲ್ಲಾ ತಾಲ್ಲೂಕು ಹಾಗೂ ಬಿಬಿಎಂಪಿ ಚುನಾವಣೆಗಳು ನಡೆಯಲಿವೆ ಎಂದರು.
ಹೈಕಮಾಂಡ್‌ಗೆ ಬಿಟ್ಟದ್ದು
ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಪುತ್ರ ಯತೀಂದ್ರ ಅವರನ್ನು ಅಭ್ಯರ್ಥಿಯನ್ನಾಗಿಸುವ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ಕೋಲಾರದಿಂದ ಸ್ಪರ್ಧೆಗಿಳಿಯಲು ಬಯಸಿದ್ದೆ.ಆದರೆ, ಹೈಕಮಾಂಡ್ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಿರಿ ಎಂದು ಹೇಳಿತ್ತು. ಆಗ ವರುಣಾ ಕ್ಷೇತ್ರದ ಶಾಸಕರಾಗಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ತಮಗೆ ಕ್ಷೇತ್ರ ಬಿಟ್ಟುಕೊಟ್ಟರು.ಆ ಸಂದರ್ಭದಲ್ಲಿ ಹೈಕಮಾಂಡ್ ಯತೀಂದ್ರ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿರುವ ಭರವಸೆ ನೀಡಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್‌ಗೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದು ಹೇಳಿದರು.