ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ: ಮಹತ್ವದ ಸೂಚನೆ

ಬೀದರ ಏ 21: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಮತ್ತು ಉಪ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಕೆಲವು ಮಹತ್ವದ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಅಭ್ಯರ್ಥಿಯೂ ಸೇರಿ ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ಯಾವುದೇ ವಾಹನಗಳನ್ನು ಬಳಸುವುದನ್ನು ಹಾಗೂ ಗುಂಪು ಗುಂಪಾಗಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಪ್ರಚಾರದ ಸಂದರ್ಭದಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸತಕ್ಕದ್ದು., ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಚಾರ ಕೈಗೊಳ್ಳಬಹುದು., ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಈ ಸಮಯದಲ್ಲಿ ಕಡ್ಡಾಯ ಮುಖಗವುಸು ಮತ್ತು ಕೈಗವುಸು ಕಡ್ಡಾಯವಾಗಿ ಧರಿಸಬೇಕು. ಈ ಸೂಚನೆಗಳನ್ನು ಹೊರತುಪಡಿಸಿ ಯಾವುದೇ ತರಹದ ಪ್ರಚಾರವನ್ನು ಕೈಗೊಳ್ಳತಕ್ಕದ್ದಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಲಿಖಿತವಾಗಿ ತಿಳಿಸಿದ ಸೂಚನೆಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.