ಸ್ಥಳೀಯ ಸಂಸ್ಥೆಗಳಿಗೆ 4608 ಕೋಟಿ ರೂ. ಅನುದಾನ ಬಿಡುಗಡೆ

ನವದೆಹಲಿ,ಏ.2-ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ 4, 608 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ.

15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಗರ ಸಂಸ್ಥೆಗಳಿಗೆ ಈ ಅನುದಾನ ಬಿಡುಗಡೆ ಮಾಡಿದೆ.

ಕಳೆದ ಹಣಕಾಸು ವರ್ಷದಲ್ಲಿ 28 ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 87 ಸಾವಿರದ 460 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು.

ಇದರ ಪೈಕಿ 60 ಸಾವಿರದ 750 ಕೋಟಿ ರೂಪಾಯಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು 26 ಸಾವಿರದ 710 ಕೋಟಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಬಿಡುಗಡೆ ಮಾಡಿತ್ತು.

ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಈ ಅನುದಾನವನ್ನು ಒಳಚರಂಡಿ, ಬಯಲು ಬಹಿರ್ದೆಸೆ ಮುಕ್ತ ಪರಿಸ್ಥಿತಿ ನಿರ್ವಹಣೆ , ಕುಡಿಯುವ ನೀರು, ಮಳೆ ನೀರು ಕೊಯ್ಲು, ಜಲ ಮರುಪೂರಣ ಹಾಗೂ ನಗರ ಪ್ರದೇಶಗಳಲ್ಲಿ ಕೂಡ ಅನುದಾನವನ್ನು ಈ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದರ ಜೊತೆಗೆ ವಾಯುಮಾಲಿನ್ಯದ ಗುಣಮಟ್ಟ, ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.