ಸ್ಥಳೀಯ ಉದ್ಯೋಗಿಗಳಿಗೆ ತೊಂದರೆ ಕೊಡದಿರಿ: ಶಾಸಕ ಭರತ್


ಮಂಗಳೂರು, ಜೂ.೭- ಎಂಆರ್‌ಪಿಎಲ್‌ನಲ್ಲಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಯುವಕನೊಬ್ಬನಿಗೆ ಎಂಆರ್‌ಪಿಎಲ್ ಅಧಿಕಾರಿಗಳು ದೌರ್ಜನ್ಯ ಎಸಗಿರುವ ಆರೋಪದ ಕುರಿತಂತೆ ಶಾಸಕ ಡಾ. ಭರತ್ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೈದಿದ್ದಾರೆ.
ಎಂಆರ್‌ಪಿಎಲ್‌ನ ಆರು ಮಂದಿ ಅಧಿಕಾರಿಗಳು ಶುಕ್ರವಾರ ರಾತ್ರಿ ಸ್ಥಳೀಯ ಯುವಕನೊಬ್ಬನ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದು ಅದರಲ್ಲಿರುವ ಫೊಟೋಸ್, ದಾಖಲೆಗಳನ್ನು ತಡಕಾಡಿ ಯುವಕನಿಗೆ ಮಾನಸಿಕ ದೌರ್ಜನ್ಯ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಎಂಆರ್‌ಪಿಎಲ್ ಅತಿಥಿ ಗೃಹಕ್ಕೆ ತೆರಳಿದ ಡಾ. ಭರತ್ ಶೆಟ್ಟಿ, ಅಧಿಕಾರಿಗಳು ಪೊಲೀಸರ ಕೆಲಸ ಮಾಡಬಾರದು. ಮೊಬೈಲ್ ಕಸಿದು ಒಳಗಿನ ಮಾಹಿತಿ ಪರಿಶೀಲಿಸುವುದು ಉದ್ಯೋಗಿಯ ಖಾಸಗಿತನದ ಮೇಲೆ ಪ್ರಹಾರ ಮಾಡಿದಂತೆ. ಕೆಲಸದ ವೇಳೆಯಲ್ಲಿ ಉದ್ಯೋಗಿ ಗಳು ಮೊಬೈಲ್ ತೆಗೆದುಕೊಂಡು ಹೋಗಿದ್ದು ತಪ್ಪಾಗಿದ್ದಲ್ಲಿ ದಂಡ ಹಾಕುವುದನ್ನು ಬಿಟ್ಟು ಮೊಬೈಲ್ ಕಸಿದು ಅದರೊಳಗಿನ ಮಾಹಿತಿ ಪರಿಶೀಲಿಸುವುದು ತಪ್ಪು ಎಂದರು. ಈ ಸಂದರ್ಭ ಉಪಸ್ಥಿತರಿದ್ದ ಕಂಪೆನಿಯ ಉನ್ನತ ಅಧಿಕಾರಿಗಳಾದ ಬಿ.ಎಚ್.ವಿ. ಪ್ರಸಾದ್ ಹಾಗೂ ಕೃಷ್ಣ ಹೆಗ್ಡೆಯವರು ಇಂತಹ ಘಟನೆಗಳು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಹಾಗೂ ಆ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರು ಜನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಎಂಆರ್‌ಪಿಎಲ್‌ನಲ್ಲಿ ಕೆಲಸ ಮಾಡುವ ಸ್ಥಳೀಯರಿಗೆ ಅಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಂದು ಶಾಸಕರು ಪೊಲೀಸ್ ಸಬ್ ಇನ್ಸಪೆಕ್ಟರ್ ಚಂದ್ರಪ್ಪ ಅವರಿಗೆ ಸೂಚಿಸಿದರು. ಡಾ.ಭರತ್ ಶೆಟ್ಟಿಯವರೊಂದಿಗೆ ಪಾಲಿಕೆ ಸ್ಥಾಯಿ ಸಮತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಉಪಸ್ಥಿತರಿದ್ದರು.