ಸ್ಥಳೀಯ ಆಡಳಿತದ ಬಲವರ್ಧನೆಗೆ ಕೊಂಡಯ್ಯರನ್ನು ಗೆಲ್ಲಿಸಿ – ಮಾಜಿ ಸಚಿವ ಸಂತೋಷ ಲಾಡ್.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಡಿ. 8:-  ಗ್ರಾಮಪಂಚಾಯಿತಿ  ಸಂಪೂರ್ಣ ಅಧಿಕಾರ ನೀಡುವುದಕ್ಕೆ ಹಾಗೂ ಸ್ಥಳೀಯ ಆಡಳಿತ ಬಲವರ್ಧನೆಗಾಗಿ ಶ್ರಮಿಸಿದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರನ್ನು ಗೆಲ್ಲಿಸುವಂತೆ ಮಾಜಿ ಸಚಿವ ಸಂತೋಷ್‌ಲಾಡ್ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆ.ಸಿ.ಕೊಂಡಯ್ಯ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಾ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶವ್ಯಾಪ್ತಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಬಡವರ ಹಸಿವು ನೀಗಿಸುವ ಕಾರ್ಯ ಮಾಡಿತು. ಆದರೆ, ಈಗಿನ ಬಿಜೆಪಿ ಸರ್ಕಾರವು ನರೇಗಾ ಯೋಜನೆಯನ್ನು ತಡೆ ಹಿಡಿಯಲು ಹೊರಟಿತ್ತು ಎಂದು ಆರೋಪಿಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗುಜ್ಜಲ ರಘು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಭಿಸುವ ಮತಗಳು ವಿಭಜನೆಯಾಗಿ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು. ಕ್ಷೇತ್ರದ ಮುಖಂಡರು ಸೇರಿ ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ದೊರೆಯಲಿವೆ ಎಂದು ತಿಳಿಸಿದರು.
ಸಂಡೂರು ಶಾಸಕ ಈ.ತುಕರಾಂ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮುಂಡ್ರಿಗಿ ನಾಗರಾಜ, ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಮಣಿ ಜಿಂಕಾಲ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ಮುಖಂಡರಾದ ಬಿ.ಎಂ.ಪಾಟೀಲ್, ನರಸಿಂಹಗಿರಿ ವೆಂಕಟೇಶ್, ಅಸುಂಡಿ ಹೊನ್ನೂರಪ್ಪ, ಆಶಾಲತಾ ಸೋಮಪ್ಪ, ಕಾವಲ್ಲಿ ಶಿವಪ್ಪನಾಯಕ, ಜಿ.ಓಬಣ್ಣ , ದಿನ್ನೆಮಲ್ಲಿಕಾರ್ಜುನ, ಬಿ.ಇ.ಜಗದೀಶ, ಕಾನಮಡುಗು ನಿವೃತ್ತ ಜೆಇ  ಶರಣಪ್ಪ, ಜೆ.ಎಂ.ಕೃಷ್ಣನಾಯ್ಕ್, ಗುಡೇಕೋಟೆ ರಾಘವೇಂದ್ರರಾವ್, ಗುರುಸಿದ್ದನಗೌಡ ಸೇರಿ ಇತರರು ಇದ್ದರು.