ಸ್ಥಳೀಯ ಅಭ್ಯರ್ಥಿಗೆ ಬೆಂಬಲಿಸಿ :  ಎಚ್ ಮಹೇಶ್

ಹಿರಿಯೂರು : ಮಾ.15-ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗೆ ಒಮ್ಮೆ ಅವಕಾಶ ನೀಡಿ, ತಾಲೂಕಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಭರವಸೆ ನೀಡಿದರು.ತಾಲ್ಲೂಕಿನ ದೊಡ್ಡಘಟ್ಟ, ಕೂನಿಕೆರೆ, ಕೆರೆಕೋಡಿಹಟ್ಟಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಮತಪ್ರಚಾರ ಕೈಗೊಂಡು ಮಾತಾನಾಡಿದರು.ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುತ್ತೇವೆ. ಬಡಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತದೆ. ಇದರ ಜೊತೆಗೆ ರೈತರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು. ಈ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮಹೇಶ್ ತಿಳಿಸಿದರು.ನಮ್ಮ ಊರಿನ ಪಕ್ಕದಲ್ಲಿ ವಿವಿ ಸಾಗರ ಜಲಾಶಯ ಇದೆ. ಇಲ್ಲಿಂದ ಚಳ್ಳಕೆರೆಗೆ ನೀರು ಕೊಟ್ಟಿದ್ದಾರೆ. ಡ್ಯಾಂ ಪಕ್ಕದಲ್ಲಿರುವ ಕೆರೆಕೋಡಿಹಟ್ಟಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಲ್ಲದೆ ನಾವು ಬಡವರು ಇದ್ದೇವೆ. ಮನೆ ಕಟ್ಟಿಕೊಳ್ಳಲು ಒಂದು ಜಾಗವಿಲ್ಲ. ಬಡವರಿಗೆ ಒಂದು ಎಕರೆ ಜಮೀನು ನೀಡಿದ್ರೆ ನಮಗೆ ಜೀವನಕೆ ಒಂದು ದಾರಿ ಆಗುತ್ತಿತ್ತು ಎಂದು ಮಹಿಳೆಯೊಬ್ಬರು ಅಭ್ಯರ್ಥಿ ಮುಂದೆ ತನ್ನ ಅಳಲನ್ನು ತೋಡಿಕೊಂಡರು. ಗ್ರಾಮದ ಸಮಸ್ಯೆಗಳ ಬಗ್ಗೆ ಹಾಲಿ ಹಾಗೂ ಮಾಜಿ ಶಾಸಕರ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಿಲ್ಲ.ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಾದರೆ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅಭ್ಯರ್ಥಿಗೆ ಗ್ರಾಮಸ್ಥರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಚಂದ್ರಣ್ಣ, ಮಂಜುನಾಥ್, ನರೇಂದ್ರ, ಲತಾ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು