ಸ್ಥಳೀಯರಿಗೆ ಬಿಜೆಪಿ ಟಿಕೇಟ್ ಕೊಟ್ಟರೆ ಗೆಲ್ಲಿಸಿ ತೋರಿಸ್ತೇವೆ – ಲಿಂಗಾಯತ ಮುಖಂಡರ ಮಾತು.


ಸಂಜೆವಾಣಿ ವಾರ್ತೆ
 ಕೂಡ್ಲಿಗಿ ಏ.5 :-  ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಎಸ್.ಟಿ.ಮೀಸಲಾಗಿರುವುದ್ದರಿಂದ ಸ್ಥಳೀಯ ಎಸ್.ಟಿ.ಅಭ್ಯರ್ಥಿಗಳನ್ನು ಲಿಂಗಾಯತರು ಗೆಲ್ಲಿಸುವುದಿಲ್ಲ ಎಂಬ ಕಳಂಕ ಇದೆ ಈ ಕಳಂಕವನ್ನು ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿ ಹೈಕಮಾಂಡ್ ಸ್ಥಳೀಯರಿಗೆ ಈ ಬಾರಿ ಟಿಕೇಟ್ ಕೊಟ್ಟು ನೋಡಿ ನಾವು ಗೆಲ್ಲಿಸುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ಗೆ ಸ್ಥಳೀಯ ಲಿಂಗಾಯತ ಮುಖಂಡರು ಆಗ್ರಹಿಸಿದರು.
 ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ  ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣನಗೌಡ ಮಾತನಾಡುತ್ತ  ಲಿಂಗಾಯತರು ಸ್ಥಳೀಯ ಅಭ್ಯರ್ಥಿಗಳಿಗೆ ವಿರೋಧವಿಲ್ಲ ಹೈಕಾಮಾಂಡ್ ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಬಿಜೆಪಿ ಟಿಕೇಟ್ ಕೊಟ್ಟು ನೋಡಲಿ ನಾವು  ಗೆಲ್ಲಿಸುತ್ತೇವೆಯೋ ಇಲ್ಲವೆಂದು ಗೊತ್ತಾಗುತ್ತದೆ. ಹೈಕಮಾಂಡ್ ಸ್ಥಳೀಯರಿಗೆ ಟಿಕೇಟ್ ನೀಡದಿದ್ದರೆ ನಾವೇನು ಮಾಡಬಹುದು ಹೇಳಿ. ಈ ಬಾರಿ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು, ರಾಜ್ಯಮುಖಂಡರು ಸ್ಥಳೀಯ ಅಭ್ಯರ್ಥಿಗೆ ಯಾರಿಗೆ ನೀಡಲಿ ನಾವು ಒಕ್ಕೊರಲಿನಿಂದ ಅವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿಯ  ಕೂಡ್ಲಿಗಿ ಮಂಡಲ ಅಧ್ಯಕ್ಷ ಚನ್ನಪ್ಪ ಮಾತನಾಡಿ ಈ ಹಿಂದೆ ನಾಗೇಂದ್ರ ಅವರು ಕ್ಷೇತ್ರಬಿಟ್ಟು ಹೋಗುವಾಗ ತಮ್ಮ ಆಪ್ತರಿಗೆ,ಕಾರ್ಯಕರ್ತರಿಗೆ ತಿಳಿಸಿ ಹೋಗಿದ್ದರು. ಆದರೆ ಎನ್.ವೈ.ಗೋಪಾಲಕೖಷ್ಣ ಅವರು ಕಾರ್ಯಕರ್ತರಿಗೆ ತಿಳಿಸಿ ಹೋಗಬೇಕಿತ್ತು. ಅವರೊಬ್ಬ ಪ್ರಬುದ್ಧ ರಾಜಕಾರಿಣಿಯಾಗಿದ್ದು  ಅವರು ವ್ಯಯಕ್ತಿಕ ಕಾರಣಗಳಿಂದಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದರೆ ಹೋಗುವಾಗ ಕಾರ್ಯಕರ್ತರಿಗೆ ತಿಳಿಸಿ ಹೋಗಬೇಕಿತ್ತು ಇದರಿಂದ ಕಾರ್ಯಕರ್ತರಲ್ಲಿ ತುಂಬಾ ನೋವಾಗಿದೆ  ಎಂದರು. ಬಿಜೆಪಿಯಲ್ಲಿ ಇಲ್ಲಿಯವರೆಗೂ ಸ್ಥಳೀಯರಿಗೆ ಟಿಕೇಟ್ ನೀಡಿಲ್ಲ ಎಂಬ ಅಪವಾದ ಇದೆ ಈ ಬಾರಿ ರಾಜ್ಯಮುಖಂಡರು ಸ್ಥಳೀಯ ಅಭ್ಯರ್ಥಿಗೆ ನೀಡಬೇಕೆಂದರು ಹಾಗೂ ಸ್ಥಳೀಯವಾಗಿ ಪ್ರಮುಖರು ಸೇರಿ 13 ಮಂದಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ ಎಂದರು.        
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಲಿಂಗಾಯತ ಮುಖಂಡ ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ ಹಾಗೂ ಬೆಳ್ಳಕಟ್ಟೆ ಕಲ್ಲೇಶಗೌಡ ಮಾತನಾಡಿ ಜಿಲ್ಲಾ ಮತ್ತು ರಾಜ್ಯದ ಮುಖಂಡರಿಗೆ ಸ್ಪಷ್ಠವಾಗಿ ಹೇಳಲು ಬಯಸುತ್ತೇವೆ  2008, 2013 ಹಾಗೂ  2018ರ ಮೂರು ಚುನಾವಣೆಗಳಲ್ಲಿಯೂ ಸಹ ನಮ್ಮ ಕೂಡ್ಲಿಗಿ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿಲ್ಲ, ಈಗಾಗಿ ನಮ್ಮ ಎಸ್.ಟಿ.ಸಮುದಾಯದ ಅಣ್ಣ,ತಮ್ಮಂದಿರಗೆ ಅನ್ಯಾಯವಾಗಿದೆ. ವೀರಶೈವರು, ಕುರುಬರು, ಯಾದವರು, ಎಸ್ಸಿ, ಎಸ್ಟಿ ಮುಖಂಡರು ಸೇರಿಕೊಂಡು ನಾವೆಲ್ಲ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೇಟ್ ನೀಡಬೇಕೆಂದು ಮನವಿಮಾಡಿಕೊಳ್ಳುತ್ತೇವೆ ಎಂದರು. 2008 ರಿಂದ ಕೂಡ್ಲಿಗಿ ಕ್ಷೇತ್ರ ಎಸ್.ಟಿ.ಗೆ ಮೀಸಲಾಗಿದ್ದರಿಂದ ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನೇ  ಇಲ್ಲಿಯ ಕಾರ್ಯಕರ್ತರು ಗೆಲ್ಲಿಸಿಕೊಂಡು ಬಂದಿದ್ದಾರೆ ಈಗಿನ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಗೆ ನೀಡಿದರೆ ನಾವು ಮತ್ತಷ್ಟು ಉತ್ಸುಕತೆಯಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಬಿಜೆಪಿ ಟಿಕೇಟ್ ಆಕಾಂಕ್ಷಿ ರಾಮದುರ್ಗ ಪಾಪಣ್ಣ ಹಾಗೂ ಎಸ್ ದುರುಗೇಶ ಮಾತನಾಡಿ ಸ್ಥಳೀಯ ಆಕಾಂಕ್ಷಿ ಪಟ್ಟಿಯಲ್ಲಿ ನಾನು ಒಬ್ಬ  ಯಾರಿಗೆ ನೀಡಿದರೂ ನಾವು ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಹಾಗೂ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾದ ಎಸ್ ದುರುಗೇಶ ಮಾತನಾಡಿ ನನ್ನ ಪತ್ನಿ ಕೂಡ್ಲಿಗಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆಯಾಗಿದ್ದು ರಾಜಕೀಯ ಅನುಭವದ ಆಧಾರದ ಮೇಲೆ ಮಹಿಳಾ ಮೀಸಲು ಪರಿಗಣಿಸಿ ಸ್ಥಳೀಯರ ಸಾಲಿನಲ್ಲಿ ಪತ್ನಿ ರೇಣುಕಾ ದುರುಗೇಶ್ ಗೆ ಬಿಜೆಪಿ ಟಿಕೆಟ್ ಹೈಕಮಾಂಡ್ ನೀಡಲು ಒತ್ತಾಯಿಸಿದರು.
 ಹೈಕಮಾಂಡ್ ಮತ್ತೊಮ್ಮೆ ಹೊರಗಿನವರಿಗೆ ಟಿಕೇಟ್ ನೀಡಿದರೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಗದ ಉತ್ತರ : ಮೂರು ಬಾರಿ ಚುನಾವಣೆಯಲ್ಲಿ ನಾಗೇಂದ್ರ ಹಾಗೂ ಗೋಪಾಲಕೃಷ್ಣ ಗೆದ್ದು ನಂತರ ಕ್ಷೇತ್ರ ಬಿಟ್ಟು ಹೋಗಿದ್ದಾರೆ ಈ ಬಾರಿಯೂ ಹೊರಗಿನವರಿಗೆ ಟಿಕೇಟ್ ಹೈಕಮಾಂಡ್ ನೀಡಿದರೆ ಸ್ಥಳೀಯರಿಗೆ ಟಿಕೇಟ್ ಕೊಡಿ ಎನ್ನುವ ನಿಮ್ಮ ಕೂಗಿಗೆ ಮುಂದಿನ ನಿರ್ದಾರವೇನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಸಮಂಜಸ ಉತ್ತರ ನೀಡಲು ಮುಂದಾಗದೆ ಮುಖಂಡರು ಕಾರ್ಯಕರ್ತರ ಕಡೆ ಬೆಟ್ಟು ತೋರಿಸಿ ಸುಮ್ಮನಾದರು. ಕೂಡ್ಲಿಗಿ ಕ್ಷೇತ್ರದ ಹಿಂದಿನ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರ ಬೆಂಬಲಿಗರು ಬಿಜೆಪಿಯಲ್ಲೇ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಇರುವವರು ಇರಬಹುದು ಹೋಗುವವರು ಹೋಗಲು ಬಹುದು ಆದರೆ ಪಕ್ಷದ ನಿಷ್ಠೆ ಇದ್ದವರು ಯಾವುದೇ ಕಾರಣಕ್ಕೆ ಪಕ್ಷ ತೊರೆಯಲಾರರು ಎಂದು ಮಂಡಲ ಅಧ್ಯಕ್ಷ ಚನ್ನಪ್ಪ ಉತ್ತರಿಸಿದರು. ಬಿಜೆಪಿ ಪ್ರಮುಖ ಮುಖಂಡರಾದ ಕಾನಾಮಡುಗು ತಿಪ್ಪೇಸ್ವಾಮಿ, ಗುಂಡುಮುಣುಗು ತಿಪ್ಪೇಸ್ವಾಮಿ, ಕೂಡ್ಲಿಗಿ ಮಂಡಲ ಮಾಜಿ ಅಧ್ಯಕ್ಷ ಕೆ ಹೆಚ್ ವೀರನಗೌಡ, ಜಿ ಪಂ ಮಾಜಿ ಸದಸ್ಯ ರೇವಣ್ಣ ಸೇರಿದಂತೆ ಪ್ರಮುಖರ ಗೈರು ಕಾಣುತ್ತಿದ್ದು ಇದಕ್ಕೆ ಸಂಬಂದಿಸಿದ ಪ್ರಶ್ನೆಗೆ ಅವರೆಲ್ಲರ ಸಹಕಾರ ಸಹಮತವಿದ್ದು ಸ್ಥಳೀಯರಿಗೆ ಟಿಕೇಟ್ ನೀಡುವ ಆಗ್ರಹ ಹೈಕಮಾಂಡ್ ಗೆ ಕಳುಹಿಸುವ ಬಗ್ಗೆ ಚನ್ನಪ್ಪ, ಶರಣಗೌಡ  ಹಾಗೂ ಕಲ್ಲೇಶಗೌಡ ಉತ್ತರಿಸಿದರು.
ಬಿಜೆಪಿ ಪಕ್ಷದ ಮುಖಂಡರಾದ ಜಿ.ಕಲ್ಲೇಶಗೌಡ, ಹನುಮಂತಪ್ಪ ಶಿಂಧೆ, ವೈ.ಶರಣಪ್ಪ, ವೀರಭದ್ರಿ, ಟಿ.ಬಸವರಾಜ,ಪಾಪನಾಯಕ. ಎಸ್ ದುರುಗೇಶ,  ಶಿವಪುರ ಗುಳಿಗಿ ವೀರೇಶ್, ಬೋರ್ ವೆಲ್ ಮಂಜಣ್ಣ, ಕೋಣನಹಳ್ಳಿ ಶಂಭಣ್ಣ, ಕಾಮಶೆಟ್ಟಿ ರಾಜು, ಜೆ.ಸಿದ್ದೇಶ್, ಕಿಟ್ಟಪ್ಪನವರ ವೀರೇಶ್,  ಎಸ್.ರಾಜಪ್ಪ, ಸುರೇಶ್, ಜೆ.ಟಿ.ನಾಗರಾಜ, ಟಿ.ಎಂ.ಮಾರುತಿ,  ಎಸ್.ವೆಂಕಟೇಶ್, ರಾಘವೇಂದ್ರ ಗುರಿಕಾರ, ಅಜೇಯ, ಭರತ್ ರಾಮ್, ಎಸ್.ಬಸವರಾಜ, ಟಿ.ಎಂ.ಅಜ್ಜಯ್ಯ, ಪಿ.ಮಹೇಶ,  ಸುರೇಶ್, ಬಿ. ಭೀಮೇಶ್, ಹುಡೇಂ ಪಾಪನಾಯಕ, ಮಂಜುನಾಥ ನಾಯಕ, ಗಾಣಗಟ್ಟೆ ಮಹಾಂತೇಶ್, ಪಾಲಯ್ಯಕೋಟೆ ಕಲ್ಲೇಶ್ ಮುಂತಾದ ಹಲವಾರು ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.