ಸ್ಥಳೀಯರಿಗೆ ಬಿಜೆಪಿ ಟಿಕೇಟ್ ಗೆ ಒತ್ತಾಯ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.08: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ, ಕ್ಷೇತ್ರದ ಭೌಗೋಳಿಕ ಪರಿಚಯ ಹಾಗೂ ಸ್ಥಳೀಯರಿಗೆ ವಿಧಾನ ಸಭಾ ಕ್ಷೇತ್ರಕ್ಕೆ ಟಿಕೇಟ್ ನೀಡಬೇಕೆಂದು ಬಿಜೆಪಿಯ ದೀಸಾ ಸಮಿತಿ ಸದಸ್ಯ ಹಾಗೂ ಸ್ಪರ್ಧಾಕಾಂಕ್ಷಿ ಬ್ಯಾಲಹುಣಸಿ ರಾಮಣ್ಣ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರ ಅನುಭವಿಸಿ, ನಿವೃತ್ತಿಯಾದ ಮೇಲೂ ರಾಜಕಾರಣದ ಅಧಿಕಾರ ಅನುಭವಿಸಲು ಆಗಮಿಸಿದರೆ, ಪಕ್ಷಕ್ಕಾಗಿ ಸ್ಥಳೀಯವಾಗಿ ಹಗಲಿರುಳು ದುಡಿದವರ ಬಗ್ಗೆಯೂ ಬಿಜೆಪಿ ಹೈಕಮಾಂಡ ಯೋಚಿಸಬೇಕು ಎಂದರು.
ಸರ್ಕಾರ ನಿವೃತ್ತಿಮಾಡುವುದು ಇನ್ನು ನಿಮ್ಮ ಸೇವೆ ಸಾಕು. ನಿಮಗೆ ವಯಸ್ಸಾಗಿದೆ. ನೀವು ವಿಶ್ರಾಂತಿ ತೆಗೆದುಕೊಳ್ಳಿ ಎಂದು. ಆದರೆ ನಿವೃತ್ತಿಯಾಗಿ ನಾಲ್ಕು ವರ್ಷಗಳಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧವಿಲ್ಲದ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ ಇಲ್ಲಿ ಸ್ಪರ್ಧಿಸಲು ಸಿದ್ದವಾಗಿರುವುದು ನಿಜಕ್ಕೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಮತ್ತು ಮುಖಂಡರ ಭವಿಷ್ಯದ ಬಗ್ಗೆ ಪಕ್ಷದ ಮುಖಂಡರು ಯೋಚಿಸಬೇಕು ಎಂದರು.
ಸರ್ಕಾರದ ಅಧಿಕಾರಿಯಾಗಿದ್ದಾಗ ವಾಮಮಾರ್ಗದಲ್ಲಿ ಹಣಗಳಿಸಿಕೊಂಡು, ಪಿಕ್‌ನಿಕ್ ನಂತೆ ಎಲ್ಲಿ ಎಲ್ಲಿಂದಲೂ ನಮ್ಮ ಕ್ಷೇತ್ರಕ್ಕೆ ಆಗಮಿಸಿ, ಚುನಾವಣೆಯಲ್ಲಿ ಗೆದ್ದರೆ ಸರಿ. ಇಲ್ಲವಾದರೆ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲ. ಇಂತಹವರಿಗೋಸ್ಕರ ಪಕ್ಷದ ಕಾರ್ಯಕರ್ತರು ಯಾವ ನಂಬಿಕೆ ಮೇಲೆ ಹೋರಾಟ ಮಾಡಬೇಕು ಎಂದು ಪರೋಕ್ಷವಾಗಿ ಲಕ್ಷ್ಮಿ ನಾರಾಯಣರಿಗೆ ಟಾಂಗ್ ಕೊಟ್ಟರು.
ಕ್ಷೇತ್ರದಲ್ಲಿ ಮುಖ್ಯವಾಗಿ ಸಮರ್ಥವಾಗಿ ಚುನಾವಣೆ ಎದುರಿಸಲು ಎಲ್ಲಾ ರೀತಿಯಿಂದಲೂ ಸಮರ್ಥರಾದವರಿದ್ದಾರೆ. ಅಂತಹವರಿಗೆ ಟಿಕೇಟ್ ಕೊಡಬೇಕು. ಪ್ರಸ್ತುತ ಕ್ಷೇತ್ರದ ಜನತೆ ಬಿಜೆಪಿ ಪರವಾಗಿದೆ ಎಂದರು.