ಸ್ಥಳೀಯರಿಗೆ ಟಿಕೆಟ್ ನೀಡಲು ಕೈ ಆಗ್ರಹ

ಕೆ.ಆರ್.ಪುರ, ಅ.೩೧- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೆಕೊಳ್ಳಲುವಿನಲ್ಲಿ ವರ್ತೂರು, ಹೂಡಿ ಮತ್ತು ಮಾರತ್ತಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರಿಗೆ ಮನವಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಶೀಘ್ರವಾಗಿ ಅಭ್ಯರ್ಥಿ ಆಯ್ಕೆ ಮಾಡುವಂತೆ ಕೋರಿದರು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರು ಮುಂಬರುವ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರು ಹೇಗೆ ಸಜ್ಜಾಗಬೇಕು, ಪಕ್ಷ ಸಂಘಟನೆಯನ್ನು ಹೇಗೆ ಬಲಗೊಳಿಸಬೇಕು ಎಂಬುವುದರ ಕುರಿತು ಬ್ಲಾಕ್ ಕಮಿಟಿ ಸದಸ್ಯರೊಂದಿಗೆ ಸಭೆಯಲ್ಲಿ ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಮುನ್ನೆಕೊಳಾಲುವಿನಲ್ಲಿ ವಾರ್ಡ್ ಕಮಿಟಿ ನೇಮಕಾತಿಯ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್‌ಸಿ ಘಟಕದ ಉಪಾಧ್ಯಕ್ಷರಾದ ನಲ್ಲೂರಹಳ್ಳಿ ನಾಗೇಶ್, ಕೆಪಿಸಿಸಿ ಸದಸ್ಯ ಜಯರಾಂ ರೆಡ್ಡಿ, ಬ್ಲಾಕ್ ಅಧ್ಯಕ್ಷರಾದ ವಿಟಿಬಿ ಬಾಬು, ಪಿ. ಎಸ್ ಬಾಬುಗೌಡ, ಮುಖಂಡರಾದ ಗಫಾರ್ ಬೇಗ್, ವನಜಾರೆಡ್ಡಿ, ಸಿ.ಎಂ.ಚಂದ್ರಶೇಖರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.