ಸ್ಥಳೀಯರಿಗೆ ಉದ್ಯೋಗ ನಿರ್ಲಕ್ಷಿಸಿದರೆ ಕಠಿಣಕ್ರಮ: ಶೆಟ್ಟರ್

ಬೆಂಗಳೂರು, ಮಾ.೨೩- ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆ ಮಾಡುವಲ್ಲಿ ಕರ್ನಾಟಕ ದೇಶದಲ್ಲೇ ಕಳೆದ ಮೂರು ವರ್ಷಗಳಿಂದ ೨ ಮತ್ತು ೩ನೇ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಕೊರೊನಾ ಸೋಂಕು ಸಮಯದಲ್ಲೂ ರಾಜ್ಯದಲ್ಲಿ ಹೆಚ್ಚು ಬಂಡವಾಳ ಆಕರ್ಷಣೆ ಮಾಡಲಾಗಿದೆ. ಮಾರಿಷಸ್, ಸಿಂಗಾಪೂರ, ಅಮೆರಿಕಾ, ಇಂಗ್ಲೇಡ್, ಜರ್ಮನಿ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ೪ ಲಕ್ಷ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಅದರಲ್ಲಿ ರಾಜ್ಯಕ್ಕೆ ೧.೬೦ ಲಕ್ಷ ಕೋಟಿಯಷ್ಟಿದೆ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಚೈನಾದಿಂದ ಹೊರಬರುವ ಕಂಪನಿಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿಕೊಡುವ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ಆ ಸಮಿತಿ ಉದ್ಯಮಿಗಳ ಜತೆ ನಿರಂತರ ಸಂಪರ್ಕದಲ್ಲಿದೆ ಎಂದರು.
ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಕೈಗಾರಿಕಾ ಸ್ನೇಹಿಯಾಗಿದೆ. ೨೦೧೭-೧೮ ರಲ್ಲಿ ೫೩,೩೩೪ ಕೋಟಿ ರೂ. ವಿದೇಶಿ ನೇರ ಬಂಡವಾಳವನ್ನು ಆಕರ್ಷಣೆ ಮಾಡಲಾಗಿತ್ತು. ೨೦೧೮-೨೯ ರಲ್ಲಿ ೪೬,೯೫೩ ಕೋಟಿರೂ, ೨೦೧೯-೨೦ ರಲ್ಲಿ ೬೩,೧೭೭ ಕೋಟಿ ರೂ. ಹಾಗೂ ೨೦೨೦-೨೧ ರಲ್ಲಿ ೪೭,೪೧೩ ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಟಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಶೆಟ್ಟರ್, ಕೊಚ್ಚಿನ್‌ನಲ್ಲಿರುವ ವಿಶೇಷ ಆರ್ಥಿಕ ವಲಯಗಳ ಅಭಿವೃದ್ಧಿ ಕಛೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗಿದೆ. ರಾಜ್ಯದಲ್ಲಿ ೩೬ ವಿಶೇಷ ಆರ್ಥಿಕ ವಲಯಗಳಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉಪಆಯುಕ್ತರಕಛೇರಿ ಇದೆ. ಕೊಚ್ಚಿನ್‌ನಲ್ಲಿರುವ ಆಯುಕ್ತರ ಕಛೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ರಾಜ್ಯದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ, ಉದ್ಯೋಗ ನೀಡದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್ ಹೇಳಿದರು.
ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಥಳೀಯರ ಜತೆಗೆ ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರಿಗೂ ಉದ್ಯೋಗ ನೀಡಬೇಕು. ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರು, ಮಕ್ಕಳು ಇಂಜಿನಿಯರ್ ಸೇರಿದಂತೆ ಉನ್ನತ ಅರ್ಹತೆ ಹೊಂದಿದ್ದರೆ ಅದಕ್ಕೆ ತಕ್ಕ ಹಾಗೆ ಹುದ್ದೆಗಳನ್ನು ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.
೨೦೨೦-೨೫ರ ಕೈಗಾರಿಕಾ ನೀತಿಯಲ್ಲಿ ಶೇ. ೧೦೦ ರಷ್ಟು ಡಿ. ವರ್ಗದ ಉದ್ಯೋಗಗಳಲ್ಲಿ ಶೇ. ೧೦೦ ರಷ್ಟು ಇನ್ನುಳಿದ ಹುದ್ದೆಗಳಿಗೆ ಶೇ. ೭೦ ರಷ್ಟು ಸ್ಥಳೀಯರಿಗೆ ನೀಡಬೇಕು ಎಂಬ ನಿಯಮವಿದೆ ಎಂದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ೨೦೭೧ ಬೃಹತ್ ಮತ್ತು ಮಧ್ಯ ಕೈಗಾರಿಕೆಗಳಿದ್ದು, ೪,೮೬,೧೨೩ ಮಂದಿಗೆ ಉದ್ಯೋಗ ನೀಡಿವೆ. ಇದರಲ್ಲಿ ೩,೬೯,೪೫೩ ಮಂದಿ ಸ್ಥಳೀಯರಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೧೯೨ ಕೈಗಾರಿಕೆಗಳಿದ್ದು, ೨೭,೨೮೧ ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂದರು.