ಸ್ಥಳಿಯವಾಗಿ ಟಾಸ್ಕ್‍ಪೋರ್ಸ್ ಸಮಿತಿ ರಚಿಸಿ: ಆರ್.ನರೇಂದ್ರ

ಹನೂರು: ಮೇ.21: ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಅಧಿಕಾರಿಗಳ ಜೊತೆಗೆ ಆಯಾ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳು ಸಹಕಾರ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಇಂದು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಅಧಿಕಾರಿಗಳು ಹಾಗೂ ಪ.ಪಂ.ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳ ಮೇಲೆ ಜವಬ್ದಾರಿ ವಹಿಸಿ ನಿರ್ಲಕ್ಷ್ಯ ವಹಿಸದೇ ಅವರುಗಳ ಜೊತೆ ಸ್ಥಳಿಯ ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸೋಂಕಿತರನ್ನು ಕೋವಿಡ್ ಸೆಂಟರ್‍ಗಳಿಗೆ ಕಳುಹಿಸುವುದು ಸೇರಿದಂತೆ ಸೋಂಕಿತರ ಮನೆಗಳ ಬಳಿ ಸ್ಟಿಕ್ಕರ್ ಅಂಟಿಸುವುದು, ಕಂಟೈನ್‍ಮೆಂಟ್ ಜೋನ್ ಎಂದು ಗುರುತಿಸುವಂತಹ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಸ್ಥಳಿಯವಾಗಿ ಟಾಸ್ಕ್‍ಪೋರ್ಸ್ ಸಮಿತಿ ರಚಿಸಿ:
ಪ.ಪಂ.ಅಧ್ಯಕ್ಷರ ನೇತೃತ್ವದಲ್ಲಿ ಸಬ್ ಇನ್ಸ್‍ಪೆಕ್ಟರ್ ಹಾಗೂ ಪ.ಪಂ.ಸದಸ್ಯರುಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ಸ್ಥಳಿಯವಾಗಿ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಿ ಕರೋನಾ ಸೋಂಕು ನಿಯಂತ್ರಣ ಮುಂಜಾಗ್ರತ ಕ್ರಮಗಳ ಬಗ್ಗೆ ನಿಗಾ ವಹಿಸುವುದು ಈ ಬಗ್ಗೆ ತಾಲ್ಲೂಕು ಟಾಸ್ಕ್‍ಪೋರ್ಸ್ ಸಮಿತಿಗೆ ಮಾಹಿತಿಯನ್ನು ಒದಗಿಸಬೇಕೆಂದು ಪ.ಪಂ.ಮುಖ್ಯಾಧಿಕಾರಿ ಮೂರ್ತಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಕರೋನಾ ಸೋಂಕಿತರ ಮನೆ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲು ಹಾಗೂ ತೊಂಬೆಗಳನ್ನು ಶುಚಿಗೊಳಿಸಲು ಪ.ಪ.ಸದಸ್ಯರುಗಳು ಹಾಗೂ ನಾಮ ನಿರ್ದೇಶಿತ ಸದಸ್ಯರುಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ.ಪಂ.ನಾಮ ನಿರ್ದೇಶಿತ ಸದಸ್ಯರಾದ ವೆಂಕಟೇಗೌಡ, ಪುಟ್ಟರಾಜು, ಉಪಾಧ್ಯಕ್ಷ ಹರೀಶ್‍ಕುಮಾರ್, ಸದಸ್ಯರುಗಳಾದ ಸೋಮಶೇಖರ್, ಗೀರೀಶ್‍ಕುಮಾರ್, ಸಂಪತ್‍ಕುಮಾರ್, ಸುದೇಶ್, ತಹಶೀಲ್ದಾರ್ ಜಿ.ಹೆಚ್.ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್, ಇದ್ದರು.