ಬೈಲಹೊಂಗಲ,ಜೂ30: ಹಿಂದಿನ ಸಿದ್ದರಾಮಯ್ಯ ಸರ್ಕಾರದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು, ಈಗ ಮತ್ತೆ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ತಾಲೂಕಿನ ನೇಸರಗಿ ಗ್ರಾಮಕ್ಕೆ ನೂತನ ಸಚಿವರಾಗಿ ಆಗಮಿಸಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕವಾದ ಸಚಿವಾಲಯ, ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ತುಂಬಾ ದಿನಗಳಿಂದ ಬೇಡಿಕೆ ಇದೆ. ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ, ಸಮುದಾಯದ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಎಲ್ಲ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ವಿದ್ಯಾರ್ಥಿ ವೇತನ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಹಲವು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಅವುಗಳನ್ನು ಮರು ಜಾರಿಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ, ಉದ್ಯಮ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಸಮುದಾಯದ ಜನರು ಮುಂದೆ ಬರಬೇಕು. ವಾಲ್ಮೀಕಿ ನಾಯಕ ಸಮುದಾಯ ಬಹಳ ದಾರಿ ತಪ್ಪಿ ಹೋಗಿತ್ತು, ಈಗ ಸರಿ ಹಾದಿಗೆ ಬಂದಿದೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ಅಧಿಕಾರಕಾರದಲ್ಲಿದ್ದಾಗ ಪಿಡಬ್ಲೂಡಿ ಕೆಲಸಗಳು ಅಪೂರ್ಣ ಆಗಿರುವ ಬಗ್ಗೆ ಮಾಹಿತಿ ಬಂದಿದ್ದು ಅವುಗಳ ಸಂಪೂರ್ಣವಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ಪೂರ್ಣ ಮಾಡುವುದಾಗಿ ಹೇಳಿದರು. ಕ್ಷೇತ್ರದಲ್ಲಿ ರಸ್ತೆ ಬಗ್ಗೆ ಏನಾದರೂ ಜಲ್ವಂತ ಸಮಸ್ಯೆ ಇದ್ದರೆ ನೇರವಾಗಿ ನನಗೆ ತಿಳಿಸಿ ಎಂದರು.
ಈ ಸಂಧರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಕೇರಿ, ಭರಮಣ್ಣ ಸತ್ಯೆನ್ನವರ, ನಿಂಗಪ್ಪ ತಳವಾರ, ಶಿವನಗೌಡ ಪಾಟೀಲ, ಅಡಿವೆಪ್ಪ ಮಾಳನ್ನವರ, ಸತಾರ ಮೊಖಾಶಿ, ರವಿ ಸಿದ್ದಮ್ಮನ್ನವರ, ಅಬ್ಬಾಸ್ ಅಲಿ ಪೀರಜಾದೆ, ಶಿವನಪ್ಪ ಮದೇನ್ನವರ, ಸುಜಾತ ಪಾಟೀಲ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಶ್ರೀನಿವಾಸ ಹಮ್ಮನ್ನವರ, ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ, ಮಕಬುಲ್ ಬೇಪಾರಿ, ಅಣ್ಣಪ್ಪ ಕಡಕೋಳ, ಚನ್ನಗೌಡ ಪಾಟೀಲ ಇದ್ದರು.