ಸ್ತ್ರೀ ಸಮಾನತೆಯಿಂದ ಬದಲಾವಣೆ


ಬಾಗಲಕೋಟೆ,ಮಾ.14 : ಸರಕಾರ ಮಹಿಳೆಯರಿಗೂ ಸಹ ಸಮಾನ ಅವಕಾಶ ಕಲ್ಪಿಸಿದ್ದರಿಂದ ಇಂದು ಪ್ರತಿಯೊಂದ ಕ್ಷೇತ್ರದಲ್ಲಿಯೂ ಬದಲಾವಣೆ ನೋಡುತ್ತಿದ್ದೇವೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸನಾತನ ಕಾಲದಿಂದಲೂ ಸ್ತ್ರೀಯರಿಗೆ ಗೌರವ ಕೊಡಲಾಗುತ್ತಿದ್ದು, ಭಾರತ ದೇಶದಲ್ಲಿ ಸ್ತ್ರೀಯರಿಗೆ ಪೂಜ್ಯ ಸ್ಥಾನವಿದೆ. ತಾಯಿಯಾಗಿ, ಸಹಯೋದರಿಯಾಗಿ, ಪತ್ನಿಯಾಗಿ ಕುಟುಂಬ ನಿರ್ವಹಿಸುವದರ ಜೊತೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರಿತಿಸಿಕೊಂಡಿದ್ದಾಳೆ. ಇದನ್ನು ಗಮನಿಸಿದಾಗ ಸ್ತ್ರೀ ಅಬಲೆಯಲ್ಲ ಸಬಲೆ ಎನ್ನುವ ಮಾತು ದಿಟವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಪುರುಷರಿಗೆ ಸಮಾನದಾವ ಕೆಲಸ ಮಹಿಳೆಯೂ ಕೂಡಾ ಮಾಡುತ್ತಿದ್ದಾಳೆ ಎಂದರು.
ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಮಾತನಾಡಿದರು.