ಸ್ತ್ರೀ ಸಮಾನತೆಗೆ ಪ್ರತಿಯೊಬ್ಬರ ಪಾತ್ರವೂ ಮುಖ್ಯ

ಲಕ್ಷ್ಮೇಶ್ವರ, ಮಾ25: ಮಾನವೀಯತೆಯ ಸಾಕಾರ ಮೂರ್ತಿ, ಸಂಸ್ಕ್ರತಿ, ಸಂಸ್ಕಾರ, ಧರ್ಮದ ಪ್ರತಿರೂಪವೇ ಆದ ಮಹಿಳೆಗೆ ಭಾರತೀಯ ಸಂಸ್ಕøತಿಯಲ್ಲಿ ಪೂಜ್ಯನೀಯ ಸ್ಥಾನವಿದೆ. ಈ ಪರಂಪರೆ ಮುಂದುವರೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದು ಗದಗಿನ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಲಕ್ಷ್ಮೇಶ್ವರ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಗಳ ಪದಗ್ರಹಣ ಸಮಾರಂಭ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ತಾಯಂದಿರು ಹೆಣ್ಣು-ಗಂಡೆಂಬ ಬೇಧ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಧರ್ಮದ ಬಗ್ಗೆ ತಿಳುವಳಿಕೆ ನೀಡಬೇಕು. ಸ್ತ್ರಿ ಸಮಾನತೆ ಬಗ್ಗೆ ಸಮಾಜದ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ಬದುಕು ಶಾಶ್ವತವಲ್ಲ ಹುಟ್ಟು ಸಾವಿನ ನಡುವಿನ ಪಯಣದಲ್ಲಿ ದೇವರ ಬಗ್ಗೆ ನಂಬಿಕೆ, ಭಕ್ತಿ, ಶೃದ್ಧೆ ಹೊಂದಬೇಕು. ಮನುಷ್ಯರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ, ಅಂತಃಕರಣದ ಮನೋಭಾವದೊಂದಿಗೆ ಕಾಯಕಯೋಗಿಗಳಾಗಿ ಬದುಕುವ ಮೂಲಕ ಜೀವನದ ಸಾರ್ಥಕತೆ ಹೊಂದಬೇಕು.
12 ನೇ ಶತಮಾನದ ಬಸವಾದಿ ಶರಣರು, ಅಕ್ಕಮಹಾದೇವಿಯಂತಹ ಶರಣೆಯರು ಸಮಾಜದಲ್ಲಿ ಎಲ್ಲ ಸ್ತರಗಳಲ್ಲೂ ಸಮಾನ ಸ್ಥಾನಮಾನ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ. ಫಲವಾಗಿ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಲಭಿಸಿರುವುದು ಗಮನಾರ್ಹ. ಅಕ್ಕಮಹಾದೇವಿಯು ತನ್ನ ವಚನಗಳ ಮೂಲಕ ವಿಜ್ಞಾನ, ಧರ್ಮ, ಸಂಸ್ಕಾರ, ಬದುಕಿನ ಮೌಲ್ಯಗಳ ಬಗ್ಗೆ ತಿಳಿಸಿದ್ದಾರೆ. ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯು ಶರಣರ ವಚನಗಳನ್ನು ಜನ ಮಾನಸದಲ್ಲಿ ಬಿತ್ತುವ ಕಾರ್ಯ ನಿರಂತರವಾಗಬೇಕು. ಕಸಾಪ ಮತ್ತು ಶಸಾಪಗಳಲ್ಲಿ ಮಹಿಳಾ ಘಟಕ ಸಕ್ರೀಯವಾಗಬೇಕು. ಗದಗನಲ್ಲಿನ ವಾಣಿಜ್ಯೋದ್ಯಮ ಸಂಸ್ಥೆ ಇಂದು ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಡುವಲ್ಲಿ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಶಸಾಪ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಬಸವಾದಿ ಶಿವಶರಣರ ತತ್ವ ಹಾಗೂ ಆದರ್ಶಗಳನ್ನು ನಾಡಿನಾದ್ಯಂತ ಹರಡುವ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ತು ಜಾತಿ ಮತ ಪಂಥಗಳನ್ನು ಮೀರಿದ ಸಂಘಟನೆಯಾಗಿದೆ. ಶರಣರ ಸಾಹಿತ್ಯವನ್ನು ಜನರ ಮನ ಮತ್ತು ಮನೆಗಳಿಗೆ ತಲುಪಿಸುವ ಕಾರ್ಯವನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪರಿಷತ್ತಿನ ಮಹಿಳಾ ತಾಲೂಕು ಘಟಕ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.
ಈ ವೇಳೆ ಶಸಾಪ ಮತ್ತು ಕದಳಿ ಮಹಿಳಾ ವೇದಿಕೆ ನೂತನಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ಪುರಸಭೆ ಅಧ್ಯಕ್ಷ ಪೂರ್ಣಿಮಾ ಪಾಟೀಲ, ಜಯಶ್ರೀ ಹುಬ್ಬಳ್ಳಿ, ಬ್ರಹ್ಮಕುಮಾರಿ ನಾಗಲಾಂಬಿಕೆ, ಅಕ್ಷತಾ ಬಸವಾ, ಲಲಿತಾ ಅರಳಿ, ಕೆ.ಎ.ಬಳಿಗೇರ. ಚಂದ್ರಣ್ಣ ಮಹಾಜನಶೆಟ್ಟರ. ಪ್ರೇಮಕ್ಕ ಬಿಂಕದಕಟ್ಟಿ, ಡಾ,ಗಿರೀಶ ಮರೆಡ್ಡಿ ಸಭೆಯಲ್ಲಿ ಎಲ್.ಎಸ್,ಅರಳಿಹಳ್ಳಿ, ಎಂ.ಎಸ್.ಚಾಕಲಬ್ಬಿ, ನಿರ್ಮಲಾ ಅರಳಿ. ರತ್ನಾ ಕರ್ಕಿ ಸೇರಿ ಅನೇಕರು ಇದ್ದರು. ಅಶ್ವಿನ ಅಂಕಲಕೋಟಿ. ರೇಖಾ ವಡಕಣ್ಣವರ, ರತ್ನಾ ಕರ್ಕಿ ಕಾರ್ಯಕ್ರಮ ನಿರ್ವಹಿಸಿದರು.