ಸ್ತ್ರೀ ಮಾನವ ಜನಾಂಗದ ಅಸ್ಮಿತೆ : ಪುಣ್ಯವತಿ ವಿಸಾಜಿ

ಬೀದರ:ಮಾ.27:ಸ್ತ್ರೀಯರು ಮಾನವ ಜನಾಂಗದ ಅಸ್ಮಿತೆಯಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಹಾಗೂ ಅಗೌರವ ಆಗುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ. ಪ್ರತಿಯೊಬ್ಬರು ಮಾನವೀಯ ಹಾಗೂ ನೈತಿಕ ನೆಲೆಗಟ್ಟಿನ ಮೇಲೆ ಜೀವನ ಸಾಗಿಸುತ್ತ ಸುಂದರ ಸದೃಢ ಸಮಾಜ ನಿರ್ಮಿಸುವಂತಾಗಬೇಕು ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ತಿಳಿಸಿದರು. ಅವರು ಸಮಾಜ ಸೇವಾ ಸಮಿತಿ ಬೆಂಗಳೂರು ಶಾಖೆ, ಬೀದರ ವತಿಯಿಂದ ಕರುನಾಡು ಸಾಂಸ್ಕøತಿಕ ಸಭಾಂಗಣದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ವಿಶೇಷ ಉಪನ್ಯಾಸಕರಾಗಿ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಧನಲಕ್ಷ್ಮಿ ಪಾಟೀಲ ಮಾತನಾಡುತ್ತ - ಹೆಣ್ಣಿಗೆ ಹಿಂದಿನಿಂದಲು ಅನೇಕ ಸಂಕಷ್ಟಗಳು ಎದುರಾಗುತ್ತಲೆ ಇವೆ. ಅವೆಲ್ಲವನ್ನು ಸಹಿಸಿಕೊಂಡು ಕುಟುಂಬವನ್ನು, ಸಮಾಜವನ್ನು ಉತ್ತಮವಾಗಿ ಮುನ್ನಡಿಸಿಕೊಂಡು ಬರುತ್ತಿರುವುದು ಅವಳ ತಾಳ್ಮೆಗೆ ಸಾಕ್ಷಿಯಾಗಿದೆ. ಅನೇಕ ಮಹಾಪುರುಷರ, ಹೋರಾಟಗಾರರ ಫಲವಾಗಿ ಇಂದು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನ ಮಾನಗಳು ದೊರಕುತ್ತಿವೆ. ಪ್ರಸ್ತುತ ಅವಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವಂತಾಗಬೇಕು ಎಂದು ವಿವರಿಸಿದರು. 
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಪುಂಡಲೀಕರಾವ ಇಟಕಂಪಳ್ಳಿ ಆಗಮಿಸಿ ಮಾತನಾಡುತ್ತ - ಇಂದು ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕ ಅದಃಪತನದಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಹೆಣ್ಣು ಮಕ್ಕಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಗುವಂತಾಗಬೇಕು ಎಂದು ಹೇಳಿದರು. 
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ - ಗಡಿಭಾಗದಲ್ಲಿ ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯು ನಲಗುತ್ತಿದೆ. ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಹಾಗೂ ಮೂಲಸೌಲಭ್ಯಗಳನ್ನ ಒದಗಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಈ ಭಾಗದಲ್ಲಿ ಉಳಿಸಿ ಬೆಳೆಸುವಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುತ್ತೇನೆ. ಎಲ್ಲಾ ಕನ್ನಡಿಗರ ಸಹಕಾರ ಇರಲಿ ಎಂದು ಕೋರಿದರು.   
ಅಧ್ಯಕ್ಷತೆಯನ್ನು ಸಮಾಜ ಸೇವಾ ಸಮಿತಿ, ಬೀದರ ಸಂಚಾಲಕಿ ಮಹಾದೇವಿ ಬಿರಾದಾರ ವಹಿಸಿಕೊಂಡು ಮಾತನಾಡಿ - ಸಮಾಜ ಸೇವಾ ಸಮಿತಿಯು ಎಲೆಮರೆ ಕಾಯಿಯಂತೆ ಸಮಾಜದ ಒಳಿತಿಗಾಗಿ ಪ್ರಮಾಣಿಕ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡುವ ಮೂಲಕ ಅವರ ಕಾರ್ಯಕ್ಕೆ ಗೌರವ ನೀಡುತಿದ್ದೆ ಎಂದು ಹೇಳಿದರು. 
ಪ್ರಾಸ್ತಾವಿಕವಾಗಿ ಸಮಾಜ ಸೇವಾ ಸಮಿತಿ, ಬೆಂಗಳೂರು ಕಾರ್ಯದರ್ಶಿ ಬಿ.ಎಂ. ಶಶಿಕಲಾ ಮಾತನಾಡಿ - ಸಮಾಜದಲ್ಲಿ ತುಳಿತಕೊಳಗಾದವರಿಗೆ ನೈತಿಕ ಸ್ಥೈರ್ಯ, ಧೈರ್ಯ ಹೇಳುವ ಮೂಲಕ ಅವರ ಬಾಳಿಗೆ ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಸಮಾಜ ಸೇವಾ ಸಮಿತಿಯು ಕಳೆದ 3 ದಶಕಗಳಿಂದ ರಾಜ್ಯದಾದ್ಯಂತ ಸೇವೆ ಮಾಡುತ್ತಿದೆ ಎಂದು ತಿಳಿಸಿದರು. 
ಆದರ್ಶ ದಂಪತಿ ಪ್ರಶಸ್ತಿ ಪುರಸ್ಕøತರಾದ - ಡಾ. ಜಯದೇವಿ ಶರಣಪ್ಪ ಗೌರಾ ಔರಾದ,  ಭೂಮಿಕಾ ಬಸವರಾಜ ಘೂಳೆ ಯನಗುಂದಾ, ರೇಣುಕಾ ರಾಜಶೇಖರ ಮಂಗಲಗಿ, ಕವಿತಾ ಶಿವದಾಸ ಸ್ವಾಮಿ, ಅನ್ನಪೂರ್ಣ ರಘುನಾಥ ಮೇತ್ರೆ, ಸುನಿತಾ ಎಮ್.ಆರ್. ಗೋಡಬೋಲೆ, ಲಲಿತಾ ದಿಗಂಬರರಾವ ಪಾಟೀಲ ಹಾಗೂ ಸಮಾಜ ರತ್ನ ಪ್ರಶಸ್ತಿ ಪುರಸ್ಕøತರಾದ - ರೇಣುಕಾ ಎನ್.ಬಿ., ಸುನಿತಾ ಬಿರಾದಾರ, ರಾಜೇಶ್ವರಿ ಹೂಗಾರ, ರಾಜೇಶ್ವರಿ ಕಲ್ಮನಿ, ಡಾ. ಮಹೇಂದ್ರ ಬಿರಾದಾರ, ಸಂತೋಷ ಸರ್ಕಲ್ ಇನ್ಸಪೇಕ್ಟರ್, ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಡಾ. ಭಾಗೀರತಿ ಕೊಂಡಾ ಸ್ವಾಗತಿಸಿದರೆ, ಶ್ರೀಲತಾ ಅತಿವಾಳೆ ನಿರೂಪಿಸಿದರೆ, ಅನ್ನಪೂರ್ಣ ಮೇತ್ರೆ ವಂದಿಸಿದರು.