ಸ್ತ್ರೀಯರ ಕಲ್ಪನೆಗಳ ಸಂಕೇತಗಳೇ ಸಾಹಿತ್ಯದ ಮುನ್ನುಡಿ

ಹೊಸಪೇಟೆ, ನ.9: ಪ್ರಪಂದಲ್ಲಿ ಸದ್ಯ ಬಳಸುತ್ತಿರುವ ಸಾಹಿತ್ಯಗಳ ಮೂಲ ಬೇರುಗಳು ಸ್ತ್ರೀಯರಲ್ಲಿವೆ ಅವರ ಕಲ್ಪನೆಗಳ ಸಂಕೇತಗಳೇ ಸಾಹಿತ್ಯದ ಮುನ್ನುಡಿಗಳೆಂದು ಖ್ಯಾತ ಸಾಹಿತಿಗಳಾದ ಸುಧಾ ಚಿದಾನಂದಗೌಡ ಅವರು ತಿಳಿಸಿದರು.
ಹೂವಿನ ಹಡಗಲಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಹೊಸಪೇಟೆಯ ಚೇತನ ಸಾಹಿತ್ಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಖ್ಯಾತ ಕವಯತ್ರಿ ತೆಗ್ಗಿನಮಠದ ತಿಲೋತ್ತಮ ಗುರುಪಾದಯ್ಯ ಅವರ 72ನೇ ಜನ್ಮದಿನದ ಸ್ಮರಣಾರ್ಥವಾಗಿ ಹಿರಿಯ ಸೂಲಗಿತ್ತಿ ಆದೆಮ್ಮ ಅವರಿಗೆ ಮೊದಲ ವರ್ಷದ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ಸಾಹಿತ್ಯ:ಬೇರು-ಬಿಳಲು ವಿಷಯದ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಶಿಲಾಯುಗ ಕಾಲದ ಗುಹೆಗಳಲ್ಲಿದ್ದ ಆದಿಮಾನವರು ಹೆಚ್ಚಿನ ಸಮಯ ಗುಹೆ ಹೊರಗೆ ಆಹಾರಕ್ಕಾಗಿ ಓಡಾಡುತ್ತಿದ್ದರು, ಗುಹೆಗಳಲ್ಲಿ ಮಹಿಳೆಯರು ತಂಗಿ ಅವರೇ ಗುಹೆಗಳಲ್ಲಿನ ಚಿನ್ಹೆ, ಸಂಕೇತಗಳನ್ನು ಅವರೇ ರಚಿಸಿರಬಹುದು. ಮನುಷ್ಯನನ್ನು ಹೊರತು ಪಡಿಸಿ ಯಾವ ಜೀವಿಯು ಸಹ ಕೃತಕ ಅಭಿವ್ಯಕ್ತಿ ಮಾಧ್ಯಮವನ್ನು ಬಳಸಿಲ್ಲ ಅದರಲ್ಲೂ ಸಾಹಿತ್ಯದ ಬೇರು ಇರುವುದು ಸ್ತ್ರೀಯರಲ್ಲಿ , ವಚನಗಾತಿಯರೇ ಮೊದಲ ಮಹಿಳಾ ಕವಯತ್ರಿಯರು. ಕೆಲ ಮಹಿಳೆಯರು ಸೂಕ್ಷ್ಮ ವಿಚಾರಗಳನ್ನು ಸಾಹಿತ್ಯಗಳಲ್ಲಿ ಉಲ್ಲೇಖಿಸುತ್ತಾರೆ. ಅಂತಹ ನಿರ್ಧಾರ ಬಹುತೇಕ ಇಲ್ಲಿನ ಮಹಿಳೆಯರಲ್ಲಿ ಕಡಿಮೆ ಇದಕ್ಕೆ ಭೌತಿಕ ಸಮಸ್ಯೆಗಳು, ಇವು ಭೌಗೋಳಿಕ ಸಮಸ್ಯೆಗಿಂತ ಹೆಚ್ಚು ಕಠಿಣವಾಗಿರುತ್ತವೆ ಇಂತಹ ಸಮಸ್ಯೆಯಿಂದ ಹೊರಬಂದು ಸಾಹಿತ್ಯ ಸೃಷ್ಠಿಸುವ ಸೃಜನಶೀಲತೆ ಬರಬೇಕು. ಕೆಲವಕಡೆ ಒಳಬಂಡಾಯ ಸಾಹಿತ್ಯ ಬಂದಿವೆ ಅಂತಹವುಗಳನ್ನು ಮಹಿಳೆಯರು ರಚಿಸಿದ್ದಾರೆ ಅವರಲ್ಲಿ ವೈದೇಹಿ, ತ್ರಿವೇಣಿ, ಎಂಕೆ ಇಂದಿರಾ ಪ್ರಮುಖರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸೂಲಗಿತ್ತಿ ಆದೆಮ್ಮ ಅವರ ಮಗಳು ಉಮಾ ಪುರುಷೋತ್ತಮ ಅವರು ಸಮಾಜಸೇವಾ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಸಿ ಮಂಜುನಾಥ್ ಅವರು ಮಾತನಾಡಿ ಮಕ್ಕಳಲ್ಲಿ ಹಾಗೂ ಓದುಗರಲ್ಲಿ ಜಾತ್ಯಾತೀತ ಮನೋಭಾವ ರೂಪಿಸುವಲ್ಲಿ ಕವಯತ್ರಿ ತಿಲೋತ್ತಮ ಅವರ ಬರಹಗಳು ಪ್ರಧಾನ ಪಾತ್ರವಹಿಸಿವೆ. ಮುಂದಿನ ವರ್ಷದ ಈ ಕಾರ್ಯಕ್ರಮ ಬಳ್ಳಾರಿಯಲ್ಲಿ ನಡೆಸಲು ಚಿಂತಿಸಿದ್ದು ಈ ಕುರಿತು ಕುಟುಂಬಸ್ಥರು ಅವಕಾಶ ನೀಡಬೇಕು.
ಸೂಲಗಿತ್ತಿಯು ಪರಂಪರಾಗತವಾಗಿ ಬಂದ ವಿದ್ಯೆಯಾಗಿದೆ.ಬಳ್ಳಾರಿಯ ಹಂದ್ಯಾಳ ಗ್ರಾಮದ ಆದೆಮ್ಮ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ 5 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಅದಲ್ಲದೇ ಕೆಲ ಬಡಕುಟುಂಬಗಳಿಗೆ ಹೆರಿಗೆ ಮಾಡಿಸಿ ತಾವೇ ಹಣ ಬಟ್ಟೆಗಳನ್ನು ಕೊಡುತ್ತಿದ್ದರು ಎಂದರು.
ಕಾರ್ಯಕ್ರಮದ ಆತಿಥಿಗಳಾಗಿದ್ದ ರಂಗಭಾರತಿ ಕಾರ್ಯಾಧ್ಯಕ್ಷರಾದ ಎಂ.ಪಿ.ಸುಮಾ ವಿಜಯ್ ಅವರು ಮಾತನಾಡಿ ಇದೊಂದು ಮಾತೃವಂದನಾ ಕಾರ್ಯಕ್ರಮ, ತಾಯಿ ಹೆಸರಲ್ಲಿ ಪ್ರಶಸ್ತಿಯ ಪರಿಕಲ್ಪನೆ ಬಂದಿರುವುದು ಕುಟುಂಬದ ಹಿರಿಮೆಯಾಗಿದೆ. ಈ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ನಡೆದ ನಂತರ ಮುಂದಿನ ದಿನಗಳಲ್ಲಿ ರಂಗಭಾರತಿಯ ವತಿಯಿಂದ ಆಯೋಜಿಸಲಾಗುತ್ತದೆ. ಎಂಪಿ ಪ್ರಕಾಶ್ ಅವರ ಕುಟುಂಬ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕವಯತ್ರಿ ತಿಲೋತ್ತಮ ಅವರ ಅಳಿಯ ಉಪನ್ಯಾಸಕರಾದ ಹೆಚ್.ಎಂ.ನಿರಂಜನ ಅವರು ಮಾತನಾಡಿ ರಾಜ್ಯಮಟ್ಟದಲ್ಲಿನ ಅಮ್ಮ ಪ್ರಶಸ್ತಿಯು ಅಮ್ಮನ ಸ್ಮರಣಾರ್ಥವಾಗಿ ನೀಡುವ ಪ್ರಶಸ್ತಿಯಾಗಿದ್ದು ಅಂತಹುದೇ ನಿಟ್ಟಿನಲ್ಲಿ ಎಲೆಮರೆ ಕಾಯಿಯಾಗಿ ಸಮಾಜದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವವರನ್ನು ಗುರುತಿಸುವ ಸಲುವಾಗಿ ತಿಲೋತ್ತಮ ಅವರ ಸ್ಮರಣಾರ್ಥವಾಗಿ ಸಮಾಜಸೇವಾ ಪ್ರಶಸ್ತಿ ನೀಡಲು ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಮಹಿಳಾ ಸಂಘದ ಡಾ.ಸುಲೋಚನಾ ವಹಿಸಿದ್ದರು, ತಿಲೋತ್ತಮ ಗುರುಪಾದಯ್ಯ ಅವರ ಸಂಕ್ಷಿಪ್ತ ಪರಿಚಯವನ್ನು ಸಾಹಿತಿಗಳಾದ ಶಿವಪ್ರಕಾಶ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕ.ಸಾ.ಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ಪಲ್ಲವ ಪ್ರಕಾಶನದ ಪಲ್ಲವ ವೆಂಕಟೇಶ್, ಎಸ್.ಎಂ.ಗಿರೀಶ್, ಶಿವಲೀಲಾ ಸೋಮೇಶ್ ಉಪ್ಪಾರ ಸೇರಿದಂತೆ ಟಿ.ಎಂ.ಉಷಾರಾಣಿ ಹಾಗೂ ಸಾಹಿತ್ಯಸಕ್ತರು ಇದ್ದರು. ಟಿ.ಎಂ.ನಾಗಭೂಷಣ ನಿರೂಪಿಸಿದರು.