ಸ್ತನ್ಯ ಪಾನದ ಮಹತ್ವ ಸಾರಲು ಪುರುಷರ ಸಹಕಾರ ಅಗತ್ಯ

ಕಲಬುರಗಿ.ಆ.3: ವಿಶ್ವಸ್ತನ್ಯ ಪಾನದ ಮಹತ್ವ ಸಾರಲು ನ್ಯಾಯಯುತ ಹಕ್ಕನ್ನಾಗಿಸಿ ತಳಮಟ್ಟದ ವರೆಗೆ ಜಾಗೃತಿ ಮೂಡಿಸಬೇಕು ಮತ್ತು ಪುರುಷರ ಸಹಕಾರ ಕೂಡಾ ಇದಕ್ಕೆ ಅಗತ್ಯ ಎಂದು ಅಳಂದ ತಾಲೂಕು ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಷರಾದ ಡಾ. ಉಮಾಕಾಂತ ರಾಜಗಿರಿ ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಆ.3 ರಂದು ವಿಶ್ವ ಸ್ತನ್ಯ ಪಾನ ಸಪ್ತಾಹದಂಗವಾಗಿ ‘ಜೊತೆ ಜೊತೆಯಲಿ’ ನೇರ ಫೋನ್ ಇನ್ ಸಂವಾದದಲ್ಲಿ ಅವರು ಮಾತನಾಡಿ ಸ್ತನ್ಯ ಪಾನದ ಮಹತ್ವವನ್ನು ಮಹಿಳೆಯರು ಕರ್ತವ್ಯವೆಂದು ನಿರ್ವಹಿಸುತ್ತಿದ್ದು ಹೆಣ್ಣುಮಕ್ಕಳ ಗಂಡಂದಿರು ಕೂಡಾ ಅಷ್ಟೇ ಪ್ರೋತ್ಸಾಹ ನೀಡಿದರೆ ವಿಶ್ವಸಂಸ್ಥೆಯ ಧ್ಯೇಯ ವಾಕ್ಯ “ಸ್ತನ್ಯ ಪಾನಕ್ಕಾಗಿ ಹೆಜ್ಜೆ : ಶಿಕ್ಷಣ ಮತ್ತು ಬೆಂಬಲ” ಘೋಷಣೆ ಸಾಕಾರಗೊಳ್ಳುತ್ತದೆ ಮತ್ತು ಬದಲಾವಣೆ ಸಾಧ್ಯ ಎಂದರು.
ಭಾರತೀಯ ಮಕ್ಕಳ ಸೊಸೈಟಿ (ಐಎಪಿ)ಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಡಾ. ವಿನೋದ್ ಉಪಳಾಂವಕರ್ ಮಾತನಾಡಿ ಸ್ತನ್ಯ ಪಾನ ಉತ್ತೇಜನಕ್ಕೆ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದ್ದು ಸ್ವಯಂಸೇವಾ ಸಂಸ್ಥೆಗಳು ಕೂಡಾ ಕೈಜೋಡಿಸುತ್ತಿವೆ. ತಾಯಿ ಎದೆ ಹಾಲು ಉಣಿಸುವ ಪ್ರಕ್ರಿಯೆಗೆ ಕಾನೂನಾತ್ಮಕ ಬೆಂಬಲ ನೀಡುವುದಲ್ಲದೆ ಇದನ್ನು ಸಪ್ತಹಾದ ಬದಲಾಗಿ ಮಾಸಾಚರಣೆ ಮಾಡಿದರೆ ಉತ್ತಮ ಎಂದರು. ಆರು ತಿಂಗಳು ಕಡ್ಡಾಯವಾಗಿ ಶಿಶುಗಳಿಗೆ ಎದೆ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು ಮತ್ತು ಎರಡು ವರ್ಷಗಳ ವರೆಗೆ ಹಾಲುಣಿಸಿದರೆ ಉತ್ತಮ. ಎದೆ ಹಾಲುಣಿಸಿದರೆ ತಾಯಂದಿರ ಆರೋಗ್ಯ ವರ್ಧನೆಯಾಗುವುದಲ್ಲದೆ ಆರೋಗ್ಯವಂತ ಮಕ್ಕಳು ದೇಶಕ್ಕೆ ಲಭ್ಯವಾಗುತ್ತಾರೆ ಎಂದು ಹೇಳಿದರು. ರಾಷ್ಟ್ರೀಯ ಕುಟುಂಬ ಆರೋಗ್ಯ ವರದಿಯಂತೆ ಈ ಶೇ. 46 ರಷ್ಟು ತಾಯಂದಿರು ಮಾತ್ರ ಹೆರಿಗೆ ಆದ ಒಂದು ಗಂಟೆಗಳಲ್ಲಿ ಎದೆ ಹಾಲುಣಿಸುವ ಪ್ರಮಾಣವಿದ್ದು ಇದು ಶೇ. 100 ರಷ್ಟಾಗಬೇಕು ಎಂದು ಡಾ. ಉಪಳಾಂವಕರ ಹೇಳಿದರು.
ಸಂವಾದದಲ್ಲಿ ಸುರುಪುರದ ರವಿಶಂಕರ್, ರಾಘವೇಂದ್ರ ಭಕ್ರಿ, ಕಲಬುರಗಿಯ ವೀರೇಶ್, ಸಾವಿತ್ರಿ, ಸಂಗೀತಾ ಶಿವಕುಮಾರ್, ರವಿ, ಶ್ವೇತಾ ಕುಲಕರ್ಣಿ, ಸೇಡಂನ ಸಾವಿತ್ರಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು. ಅಶೋಕ ಸೋಂಕಾವಡೆ ತಾಂತ್ರಿಕ ನೆರವು ನೀಡಿದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್. ತಿಳಿಸಿದರು.