ಸ್ತನ್ಯಪಾನದಿಂದ ತಾಯಿ-ಮಗುವಿನ ಆರೋಗ್ಯ ವೃದ್ಧಿ

ಕಲಬುರಗಿ.ಆ.3: ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಮಗುವಿಗೆ ಹಾಲುಣಿಸುವುದರಿಂದ ಸೌಂದರ್ಯ ಹಾಳಾಗುತ್ತದೆಂಬ ಕಲ್ಪನೆ ತಪ್ಪು. ಹಾಲು ಕುಡಿಸುವುದರಿಂದ ತಾಯಿಯ ದೇಹದಲ್ಲಿ ಶೇಖರವಾದ ಅಧಿಕ ಕೊಬ್ಬು ಕರಗಿ ತಾಯಿಯ ಮೂಲ ರೂಪ ಮತ್ತು ಆರೋಗ್ಯ ಎರಡೂ ವೃದ್ಧಿಸುತ್ತದೆ. ಮಗು ಎದೆಹಾಲು ಕುಡಿಯುವದರಿಂದ ಸದೃಢವಾಗಿ ಬೆಳವಣಿಗೆಯಾಗುತ್ತದೆ. ಸ್ತನ್ಯಪಾನದಿಮದ ತಾಯಿ-ಮಗುವಿನ ಆರೋಗ್ಯ ವೃದ್ಧಿಯಾಗಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ವಿಶ್ವ ಸ್ತನ್ಯಪಾನ ಸಪ್ತಾಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಗುವಿಗೆ ಹಾಲುಣಿಸುವದರಿಂದ ತಾಯಿಗೆ ಮಾತೃತ್ವದ ತೃಪ್ತಿ ದೊರಕುತ್ತದೆ. ಗರ್ಭಿಣಿಯಾಗಿದ್ದಾಗ ಹಿಗ್ಗಿದ ಗರ್ಭಕೋಶ ಶೀಘ್ರವಾಗಿ ತನ್ನ ಸಹಜ ಸ್ಥಿತಿಗೆ ತಲುಪುತ್ತದೆ. ಹಾಲುಣಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವುದು ತುಂಬಾ ಅಪರೂಪ. ಹೆರಿಗೆಯ ತರುವಾಯ ಎರಡು-ಮೂರು ದಿನ ನಸು ಹಳದಿ ವರ್ಣದ ಮಂದ ಹಾಲು ಬರುತ್ತದೆ. ಈ ಕೊಲೆಸ್ಟ್ರಮ್ ಹಾಲನ್ನು ಅನೇಕರು ಮಗುವಿಗೆ ಕುಡಿಸುವುದಿಲ್ಲ. ಇದು ಮಗುವಿಗೆ ಸೂಕ್ತವಲ್ಲವೆಂದು ತಪ್ಪಾಗಿ ಭಾವಿಸಿ ಮೊದಲ ದಿನಗಳಲ್ಲಿ ಬರುವ ಗಟ್ಟಿ ಹಾಲನ್ನು ಹಿಂಡಿ ಚೆಲ್ಲುವುದು ತಪ್ಪು. ಕೊಲೆಸ್ಟ್ರಮ್ ಹಾಲಿನಲ್ಲಿ ಅಧಿಕ ಪ್ರೋಟಿನ್, ‘ಎ’ ಜೀವಸತ್ವ ಮತ್ತು ಮಗುವಿಗೆ ರೋಗಾಣುಗಳ ವಿರುದ್ಧ ರಕ್ಷಣೆ ನೀಡುವ ವಸ್ತುಗಳಿರುತ್ತವೆ ಎಂದರು.
ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಪುಷ್ಪಾ ಆರ್.ರತ್ನಹೊನ್ನದ್ ಮಾತನಾಡಿ, ತಾಯಿ ಮಗುವಿಗೆ ಒಂದೂವರೆ ವರ್ಷದವರೆಗೆ ಹಾಲುಣಿಸಬೇಕು. ಆರು ತಿಂಗಳುಗಳ ಕಾಲ ಬೇರೆ ಯಾವುದೇ ರೀತಿಯ ಆಹಾರವನ್ನು ನೀಡಬಾರದು. ನಾಲ್ಕು ತಿಂಗಳವರೆಗೆ ಮಗುವಿಗೆ ಅಗತ್ಯವಿರುವ ಸಕಲ ಪೋಷಕಾಂಶಗಳನ್ನು ತಾಯಿ ಹಾಲು ಪೂರೈಸುತ್ತದೆ. ಮಗುವಿನ ದೈಹಿಕ, ಮಾನಸಿಕ, ಬೆಳವಣಿಗೆಗೆ ಸೂಕ್ತವಾದ ತಾಯಿ ಹಾಲು ಅಜೀರ್ಣ, ಮಲಬದ್ಧತೆ ತೊಂದರೆ ತಡೆಯುತ್ತದೆ. ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಎದೆ ಹಾಲಿನಲ್ಲಿ ಸಾಕಷ್ಟು ಲವಣ ಮತ್ತು ನೀರು ಇರುವುದರಿಂದ ಕೊರತೆಯಾಗುವುದಿಲ್ಲ. ಮೂಳೆ ಮತ್ತು ಹಲ್ಲು ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ತಾಯಿ ಹಾಲಿನಲ್ಲಿದೆ. ಮಗು ಎದೆ ಹಾಲನ್ನು ಚೀಪಿ ಕುಡಿಯುವುದರಿಂದ ಮುಖದ ಮಾಂಸಖಂಡಗಳಿಗೆ ವ್ಯಾಯಾಮ ದೊರೆತು ಮಗುವಿನ ಮುಖ ಸುಂದರವಾಗಿ ರೂಪಗೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಸುನಿತಾ ಎಸ್.ಜಮಾದಾರ, ಶರಣು ಜಮಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಸಚಿನ್ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮುಂತಾದವರಿದ್ದರು.