
ಬೀದರ್:ಆ.6: ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಾಶಯ ಕ್ಯಾನ್ಸರ್ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಡಾ. ದೇವಕಿ ನಾಗೂರೆ ಹೇಳಿದರು.
ವಿಶ್ವ ಸ್ತನ್ಯಪಾನ ಸಪ್ತಾಹ ಪ್ರಯುಕ್ತ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ವತಿಯಿಂದ ಭಾಲ್ಕಿ ತಾಲ್ಲೂಕಿನ ಧನ್ನೂರ(ಎಸ್) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ್ಯಪಾನದಿಂದ ಮಕ್ಕಳ ಆರೋಗ್ಯಯುತ ಬೆಳವಣಿಗೆಯಾಗುತ್ತದೆ. ತಾಯಂದಿರ ಆರೋಗ್ಯಕ್ಕೂ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ತಿಳಿಸಿದರು.
ಪ್ರಸವದ ನಂತರ ಒಂದು ಗಂಟೆಯೊಳಗೆ ಮಗುವಿಗೆ ತಾಯಿ ಎದೆ ಹಾಲು ಉಣಿಸಬೇಕು. ಆರು ತಿಂಗಳು ತಾಯಿ ಹಾಲು ಮಾತ್ರ ಕೊಡಬೇಕು ಎಂದು ಡಾ. ವಿಜಯಶ್ರೀ ಬಶೆಟ್ಟಿ ಹೇಳಿದರು.
ಡಾ. ಎಸ್.ಎಂ. ಪಾಟೀಲ ಅವರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಸುರಕ್ಷಿತ ಹಾಗೂ ಸರಿಯಾದ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಮಾತನಾಡಿ, ಮಹಿಳೆಯರು ಕೆಲಸ ಮಾಡುವ ಸ್ಥಳ, ಬಸ್, ರೈಲು, ವಿಮಾನ ನಿಲ್ದಾಣ ಮೊದಲಾದ ಕಡೆಗಳಲ್ಲಿ ಮಕ್ಕಳಿಗೆ ಸ್ತನ್ಯಪಾನ ಮಾಡಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸ್ತನ್ಯಪಾನದ ಬಗೆಗೆ ತಾಯಂದಿರಿಗೆ ತಿಳಿವಳಿಕೆ ನೀಡುವುದು ಹಾಗೂ ವಿಶ್ವದಲ್ಲಿ ಭರವಸೆ ಮೂಡಿಸುವುದು ರೋಟರಿ ಸಂಸ್ಥೆಯ ಈ ವರ್ಷದ ಉದ್ದೇಶಿತ ಯೋಜನೆಗಳಲ್ಲಿ ಸೇರಿವೆ ಎಂದು ತಿಳಿಸಿದರು.
ಕ್ಲಬ್ ಕಾರ್ಯದರ್ಶಿ ಗುಂಡಪ್ಪ ಘೋದೆ, ಶಿವಕುಮಾರ ಯಲಾಲ್, ಡಾ. ಸುಭಾಷ ಬಶೆಟ್ಟಿ, ಡಾ. ಓಂಕಾರ ಸ್ವಾಮಿ, ಜಹೀರ್ ಅನ್ವರ್, ಎಸ್.ಬಿ. ಚಿಟ್ಟಾ, ರಾಜಕುಮಾರ ಜೆ ಮೊದಲಾದವರು ಇದ್ದರು.