ಸ್ಟೇಟ್ ಬ್ಯಾಂಕ್ ಸ್ಥಳಾಂತರದಿಂದ ಗ್ರಾಹಕರಿಗೆ ಸಂಕಷ್ಟ

ಸಂಡೂರು :ಅ:26: ತೋರಣಗಲ್ಲು ಗ್ರಾಮದಲ್ಲಿಯ ಹಲವಾರು ದಶಕಗಳ ಕಾಲಳಿಂದ ಕಾರ್ಯನಿರ್ವಹಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾವನ್ನು ತಕ್ಷಣ ಗ್ರಾಮದಿಂದ ತೋರಣಗಲ್ಲು ರೈಲ್ವೆ ನಿಲ್ದಾಣದ ಜಿಂದಾಲ್ ಕಂಪನಿಯ ಅವರಣಕ್ಕೆ ಸ್ಥಳಾಂತರಿಸಿದ್ದು ತೋರಣಗಲ್ಲು ಹಾಗೂ ಸುತ್ತಲಿನ ಗ್ರಾಮದ ಗ್ರಾಹಕರಿಗೆ ವಿಪರೀತ ತೊಂದರೆಯಾಗಿದೆ ಅದ್ದರಿಂದ ತಕ್ಷಣ ತೋರಣಗಲ್ಲಿಗೆ ಸ್ಥಳಾಂತರಿಸಬೇಕು ಎಂದು ಖಾತೆದಾರರ ಸಂಘದ ಸದಸ್ಯ ಬಿ.ಸುರೇಶ್‍ಬಾಬು ಒತ್ತಾಯಿಸಿದರು.
ಅವರು ತಾಲೂಕಿನ ಜಿಂದಾಲ್ ಕಂಪನಿಯ ಅವರಣಕ್ಕೆ ಸ್ಥಳಾಂತರವಾಗಿರುವ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಗ್ರಾಮದಲ್ಲಿ ಸಾವಿರಾರು ಗ್ರಾಹಕರು ಖಾತೆಯನ್ನು ಹೊಂದಿದ್ದು, 100ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿವೆ, ಕೇವಲ ಬಾಡಿಗೆ ಸಲುವಾಗಿ ಬ್ಯಾಂಕನ್ನು ಸ್ಥಳಾಂತರಿಸುವ ಮೂಲಕ ಇಡೀ ಗ್ರಾಹಕರಿಗೆ ಬ್ಯಾಂಕು ಅನ್ಯಾಯ ಮಾಡುತ್ತಿದೆ, ಅಲ್ಲದೆ ಬ್ಯಾಂಕಿಗೆ ಗ್ರಾಮದವರು ಹೋಗಬೇಕಾದರೆ ಅಟೋ ಚಾರ್ಜ 50 ರೂಪಾಯಿಗಿಂತಲೂ ಹೆಚ್ಚು ಖರ್ಚಾಗುತ್ತದೆ, ಪ್ರತಿಯೊಬ್ಬ ಮಹಿಳಾ ಸಂಘದ ಸದಸ್ಯರು ವಾರಕ್ಕೆ 2 ರಿಂದ 3 ಬಾರಿ ಹೋಗಬೇಕಾಗುತ್ತದೆ ಅದರಲ್ಲೂ ಮಹಿಳೆಯರು ಹೋಗುವುದು ಕಷ್ಟಸಾಧ್ಯವಾಗುತ್ತಿದೆ, ಅಲ್ಲದೆ ವೆಚ್ಚದಾಯಕವೂ ಅಗಿದೆ, ಅಲ್ಲದೆ ನಿತ್ಯ ವಿಪರೀತ ಜನಸಂದಣಿಯಿಂದ ತುಂಬಿರುವುದರಿಂದ ದಿನಗಟ್ಟಲೇ ಕೆಲಸ ಬಿಟ್ಟು ಅಲ್ಲಿ ಕಾಯುವಂತಹ ದುಸ್ಥಿತಿ ಉಂಟಾಗಿದೆ, ಅತಿ ಹೆಚ್ಚು ಅದಾಯ ಕೊಡುತ್ತಿದ್ದ ಗ್ರಾಹಕರನ್ನು ಬಿಟ್ಟು ಕಂಪನಿಯವು ಕಟ್ಟಡ ಕೊಡುತ್ತಾರೆ ಎಂದು ಅಲ್ಲಿಗೆ ಸ್ಥಳಾಂತರಿಸಿ ಕೇವಲ ಬಂಡವಾಳಗಾರರಿಗೆ ಈ ಬ್ಯಾಂಕು ಎನ್ನವಂತಾಗಿದ್ದು ಇದನ್ನು ತಕ್ಷಣ ಸ್ಥಳಾಂತರಿಸಬೇಕು, ಇಲ್ಲವಾದಲ್ಲಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಸಾವಿರಾರು ಸದಸ್ಯರು ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಖಾತೆದಾರರ ಮುಖಂಡರಾದ ಬಿ.ಸುರೇಶಬಾಬು, ಎಸ್. ಉಮಾಮಹೇಶ್, ಇತರ ಹೆಚ್ಚು ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.