ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ

ಚೆನ್ನೈ, ಏ.೨- ತಮಿಳುನಾಡು ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರ ಅಳಿಯನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ಎಂಕೆ ಸ್ಟಾಲಿನ್ ಪುತ್ರಿ ಸೆಂಥಾಮರೈ ಅವರ ಪತಿ ಶಬರೀಶನ್ ಅವರಿಗೆ ಸೇರಿದ ನೀಲಂಗರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಲಾಗಿದೆ. ದಾಖಲೆ ಪತ್ರಗಳ ಪರಿಶೀಲನೆ ನಡೆದಿದೆ.
ತಮಿಳುನಾಡು ವಿಧಾನಸಭೆ ಚುನಾವಣೆ ನಿಗದಿಯಾದ ಬಳಿಕ ಡಿಎಂಕೆ ನಾಯಕರ ಮನೆ ಮೇಲೆ ನಡೆಯುತ್ತಿರುವ ಎರಡನೇ ಆದಾಯ ತೆರಿಗೆ ದಾಳಿ ಇದಾಗಿದೆ.
ಕಳೆದ ತಿಂಗಳು ಡಿಎಂಕೆ ಪಕ್ಷದ ಹಿರಿಯ ನಾಯಕ ಮತ್ತು ಪಕ್ಷದ ಅಭ್ಯರ್ಥಿ ಇ.ವಿ. ವೇಲು ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಸೇರಿದಂತೆ ಇನ್ನಿತರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.
ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿರುವಣ್ಣಾಮಲೈ ಸೇರಿದಂತೆ ೧೦ ಕಡೆಗಳಲ್ಲಿ ದಾಳಿ ನಡೆಸಿದ್ದರು.
ಗೆಲುವು ತಡೆಯಲು ಆಗದು:
ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಡಿಎಂಕೆ ಪಕ್ಷದ ನಾಯಕರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಸುತ್ತಿದೆ. ಈ ರೀತಿಯ ಕುತಂತ್ರಗಳಿಂದ ತಮಿಳುನಾಡಿನ ಚುನಾವಣೆಯಲ್ಲಿ ಡಿಎಂಕೆ ಗೆಲುವು ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ದಿನಗಳು ಬಾಕಿ ಇರುವ ಸಮಯದಲ್ಲಿ ಬಿಜೆಪಿ ನಡೆಸುವ ಕುತಂತ್ರಗಳಿಗೆ ಜನ ಮರುಳಾಗುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗದು ಎಂದು ಅವರು ತಿಳಿಸಿದ್ದಾರೆ